ಇದ್ದಕ್ಕಿದ್ದಂತೆ ಕೊತಕೊತ ಕುದಿಯಲಾರಂಭಿಸಿದ ಸಂಪ್ ನೀರು: ಬೆಚ್ಚಿಬಿದ್ದ ಮಾಲೀಕ, ಕಾರಣ ನಿಗೂಢ!

ಸಂಪ್ ನಲ್ಲಿದ್ದ ನೀರು ಇದ್ದಕ್ಕಿದ್ದಂತೆ ಕುದಿಯಲಾರಂಭಿಸಿದ್ದು, ಇದನ್ನು ಕಂಡ ಮಾಲೀಕನೊಬ್ಬ ಬೆಚ್ಚಿಬಿದ್ದಿರುವ ಘಟನೆಯೊಂದು ನಗರದ ಮಾರಗೊಂಡನಹಳ್ಳಿಯಲ್ಲಿ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಂಪ್ ನಲ್ಲಿದ್ದ ನೀರು ಇದ್ದಕ್ಕಿದ್ದಂತೆ ಕುದಿಯಲಾರಂಭಿಸಿದ್ದು, ಇದನ್ನು ಕಂಡ ಮಾಲೀಕನೊಬ್ಬ ಬೆಚ್ಚಿಬಿದ್ದಿರುವ ಘಟನೆಯೊಂದು ನಗರದ ಮಾರಗೊಂಡನಹಳ್ಳಿಯಲ್ಲಿ ನಡೆದಿದೆ. 

ಬೆಂಗಳೂರು ಪೂರ್ವ ಭಾಗದ ಬಿದರಹಳ್ಳಿ ಗ್ರಾಮ ಪಂಚಾಯತಿ ನಿಯಂತ್ರಣದಲ್ಲಿ ಬರುವ ಮಾರಗೊಂಡನಹಳ್ಳಿ ಗ್ರಾಮದಲ್ಲಿ 600 ಚದರ ಅಡಿ ಮನೆಯನ್ನು ಹೊಂದಿರುವ ಸುರೇಶ್ ಪಿ ಎಂಬುವವರು ಮನೆಯನ್ನು ಬಾಡಿಗೆಗೆ ನೀಡಲು ನಿರ್ಧರಿಸಿದ್ದರು. ಹಲವು ದಿನಗಳು ಕಳೆದರೂ ಯಾರೂ ಬಾಡಿಗೆಗೆ ಬಾರದ ಕಾರಣ ಮನೆಯನ್ನು ಸ್ವಚ್ಛಗೊಳಿಸಲು ನಾಲ್ಕು ದಿನಗಳ ಹಿಂದಷ್ಟೇ ಮನೆಗೆ ಹೋಗಿದ್ದರು. ಮನೆ ಸ್ವಚ್ಛಗೊಳಿಸುವ ವೇಳೆ ಸಂಪ್ ನಿಂದ ಶಬ್ಧ ಬರುವುದು ಕೇಳಿಸಿದೆ.

ಬಳಿಕ ಸಂಪ್ ಮುಚ್ಚಳ ತೆಗೆದ ಅವರಿಗೆ ಆಘಾತ ಹಾಗೂ ಅಚ್ಚರಿ ಎದುರಾಗಿದೆ. ಸಂಪ್ ಬಾಗಿಲು ತೆಗೆಯುತ್ತಿದ್ದಂತೆಯೇ ಕುದಿಯುತ್ತಿರುವ ನೀರಿನ ಆವಿ ಮೇಲೆದ್ದಿದೆ. ಸಂಪ್'ನ ಸುತ್ತಮುತ್ತಲಿನ ಭೂ ಪ್ರದೇಶ ಬಿಸಿಯಾಗಿರುವುದು ಕಂಡು ಬಂದಿದೆ. ಇದನ್ನು ಕಂಡ ಮಾಲೀಕ ಭೀತಿಗೊಳಗಾಗಿ ಕೂಡಲೇ ಪಂಚಾಯತ್ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. 

ಕೂಡಲೇ ಕೆಲ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಬಂದು ವಿದ್ಯುತ್ ಕಾರಣದಿಂದಲೂ ನೀರು ಬಿಸಿಯಾಗಿರಬಹುದು ಎಂದು ವಿದ್ಯುತ್ ಸಂಪರ್ಕವನ್ನು ಕಡಿಗೊಳಿಸಿ, ಸಂಪ್ ನಲ್ಲಿರುವ ಬಿಸಿ ನೀರನ್ನು ತೆಗೆದು ಮತ್ತೆ ಹೊಸದಾಗಿ ನೀರನ್ನು ಹಾಕುವಂತೆ ತಿಳಿಸಿದ್ದಾರೆ. 

ಬಳಿಕ ಮಾಲೀಕರು ಸಂಪ್ ನಲ್ಲಿದ್ದ 3000 ಲೀಟರ್ ನೀರನ್ನು ತೆಗೆಸಿ, ಮತ್ತೆ 5000 ಲೀಟರ್ ನೀರನ್ನು ತುಂಬಿಸಿದ್ದಾರೆ. ಇದಾದ ಮರು ದಿನ ಮತ್ತೆ ಸಂಪ್ ನಲ್ಲಿದ್ದ ನೀರು ಕುದಿಯುತ್ತಿರುವುದು ಕಂಡು ಬಂದಿದೆ. ಈ ಘಟನೆ ಇದೀಗ ಭೂ ವಿಜ್ಞಾನಿಗಳ ಗಮನ ಸೆಳೆದಿದ್ದು, ಕೆಲವೇ ದಿನಗಳಲ್ಲಿ ಭೂವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ. 

ಹಿರಿಯ ಭೂ ವಿಜ್ಞಾನಿ ಆರ್.ಬಾಬು ಮಾತನಾಡಿ, ಇದೊಂದು ಬಹಳ ವಿಚಿತ್ರ ಹಾಗೂ ವಿಶಿಷ್ಟವಾದ ಪ್ರಕರಣವಾಗಿದೆ. ಈ ವರೆಗೂ ನಾನು ಈ ರೀತಿಯ ಎರಡು ಘಟನೆಗಳನ್ನು ನೋಡಿದ್ದೇನೆ. ಭೂಕಂಪದ ಅಲೆಗಳಿಂದ ಇಂತಹ ಘಟನೆಗಳು ಸಂಭವಿಸುತ್ತವೆ. ಮಹಾರಾಷ್ಟ್ರದ ಲಾತೂರ್ ನಲ್ಲಿ 1993ರಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. 2000ರಲ್ಲಿ ಜಾಲಹಳ್ಳಿಯ ಐದು ಬೋರ್'ವೆಲ್ ಗಳ ಪೈಕಿ ಮೂರರಲ್ಲಿ ನೈಸರ್ಗಿಕವಾಗಿಯೇ ಬಿಸಿನೀರು ಬಂದಿತ್ತು. ಇದಾದ ಕೆಲವು ದಿನಗಳ ಬಳಿಕ ತಾವರೆಕೆರೆ ಗ್ರಾಮದ ಕೆರೆಯ ನೀರಿನಲ್ಲಿ ಬಿಸಿನೀರಿನ ಗುಳ್ಳೆಗಳು ಕಾಣಿಸಿಕೊಂಡಿತ್ತು. 

ವಿಶ್ಲೇಷಣೆಗಳಲ್ಲಿ 1993ರ ಭೂಕಂಪದ ಪರಿಣಾಮ ಭೂಕಂಪದ ಅಲೆಗಳಿಂದಾಗಿ ನೈಸರ್ಗಿಕ ತಾಪಮಾನ ಕಂಡು ಬಂದಿರಬಹುದು ಎಂದು ಹೇಳಲಾಗುತ್ತಿದೆ. ಮಾರಗೊಂಡನಹಳ್ಳಿಯಲ್ಲಿ ಬೆಳಕಿಗೆ ಬಂದಿರುವ ಘಟನೆ ಕೂಡ ಇಂತಹದ್ದೇ ಘಟನೆಯಿರಬಹುದು. ಎಲ್ಲೋ ಭೂಕಂಪನ ಸಂಭವಿಸಿರಬಹುದು ಅಥವಾ ಭೂಮಿಯ ಪದರಗಳಲ್ಲಿ ಬದಲಾವಣೆಗಳಾಗಿರಬಹುದು. ಅದು ಭೂಕಂಪದ ಅಲೆಗಳು ಏಳಲು ಕಾರಣವಾಗಿರಬಹುದು.
 
ಬಿಸಿನೀರು ಬರುತ್ತಿರುವ ಸಂಪ್ ನಲ್ಲಿ ಕೆಲ ಬಿರುಕುಗಳು ಮೂಡಿರಬಹುದು. ಅಲ್ಲಿಂದ ಭೂಕಂಪದ ಶಾಖ ಬಿಡುಗಡೆಯಾಗಿ ನೀರು ಬಿಸಿಯಾಗುತ್ತಿರಬಹುದು. ಈ ಕುರಿತು ಅಧ್ಯಯನ ನಡೆಯಬೇಕಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com