ಕರ್ನಾಟಕ ವಿಧಾನಸಭೆ: ಭೂ ಸುಧಾರಣಾ ಕಾಯ್ದೆ, ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಮಸೂದೆ ಅಂಗೀಕಾರ

ತೀವ್ರ ವಿರೋಧ ಮತ್ತು ರೈತ ಸಂಘಗಳ ಪ್ರತಿಭಟನೆ ನಡುವೆಯೇ ಕರ್ನಾಟಕ ವಿಧಾನಸಭೆ ಭೂ ಸುಧಾರಣಾ ಕಾಯ್ದೆ, ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಿದೆ.
ವಿಧಾನಸಭೆ
ವಿಧಾನಸಭೆ

ಬೆಂಗಳೂರು: ತೀವ್ರ ವಿರೋಧ ಮತ್ತು ರೈತ ಸಂಘಗಳ ಪ್ರತಿಭಟನೆ ನಡುವೆಯೇ ಕರ್ನಾಟಕ ವಿಧಾನಸಭೆ ಭೂ ಸುಧಾರಣಾ ಕಾಯ್ದೆ, ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಿದೆ.

ರೈತ ಸಂಘಟನೆಗಳು ಮತ್ತು ವಿಪಕ್ಷಗಳ ವಿರೋಧದ ನಡುವೆಯೇ ರಾಜ್ಯ ಸರ್ಕಾರವು ಭೂಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಅಂಗೀಕರಿಸಿದೆ. ಈ ಎರಡೂ ಕಾಯ್ದೆಗಳನ್ನು ವಿರೋಧಿಸುತ್ತಿರುವ ರೈತ ಸಂಘಟನೆಗಳು ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರ ರಾಜ್ಯ ಬಂದ್‌ಗೆ ಕರೆ ನೀಡಿವೆ. ಇದು ರೈತರ ಮರಣ ಶಾಸನ ಎಂದು ಆರೋಪಿಸಿದ ಕಾಂಗ್ರೆಸ್‌ ಸದಸ್ಯರು ಮಸೂದೆಯ ಪ್ರತಿಯನ್ನು ಹರಿದು ಹಾಕಿದರಲ್ಲದೆ, ಸಭಾತ್ಯಾಗ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇದರ ಹಿಂದೆಯೇ ಜೆಡಿಎಸ್‌ ಸದಸ್ಯರೂ ಸಭಾತ್ಯಾಗ ಮಾಡಿದರು.

ಮಸೂದೆ ಮಂಡಿಸಿದ ಕಂದಾಯ ಸಚಿವ ಆರ್‌. ಅಶೋಕ್‌, ರೈತರಿಗೆ ಇದರಿಂದ ಯಾವುದೇ ಕಾರಣಕ್ಕೂ ತೊಂದರೆಯಾಗದು ಎಂದರು. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ರೈತರ ಸಹಿತ ಬಹುತೇಕರ ವಿರೋಧವಿದೆ. ಯಾವ ಉದ್ದೇಶಕ್ಕಾಗಿ ಭೂ ಸುಧಾರಣೆಗಳ ಕಾಯ್ದೆಯನ್ನು ದೇವರಾಜ ಅರಸು ಅವರು ತಂದಿದ್ದರೋ ಆ ಮೂಲ ಆಶಯಕ್ಕೆ ಇದು ವಿರುದ್ಧವಾಗಿದೆ. ಇದರ ಹಿಂದೆ ಬೇರೆಯದೇ ಉದ್ದೇಶವಿದೆ ಎಂದು ಆರೋಪಿಸಿದರು.

ಜೆಡಿಎಸ್‌ ಸಹಮತ
ಅಚ್ಚರಿ ಬೆಳವಣಿಗೆಯಲ್ಲಿ ಈ ಮಸೂದೆಗೆ ಜೆಡಿಎಸ್‌ ಸಹಮತ ವ್ಯಕ್ತಪಡಿಸಿತು. ಆದರೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಮಾತನಾಡಿ, ಈ ಮಸೂದೆಯನ್ನು ಕೊರೊನಾ ಸಂದರ್ಭದಲ್ಲಿ ಅಧ್ಯಾದೇಶ ಮೂಲಕ ತಂದ ಅಗತ್ಯದ ಬಗ್ಗೆ ಪ್ರಶ್ನಿಸಿದರು. ಜಮೀನು ಖರೀದಿ ಮಿತಿ ಹೆಚ್ಚು ಮಾಡಿರುವುದರಿಂದ ಮತ್ತೆ ಜಮೀನ್ದಾರಿ ಪದ್ಧತಿಯತ್ತ ಹೋಗುವಂತಾಗುತ್ತದೆ ಎಂದು ಹೇಳಿದರಾದರೂ ಇದರಿಂದ ರೈತರಿಗೆ ಎಷ್ಟು ಅನುಕೂಲ ಎಂಬ ಬಗ್ಗೆ ಪರಿಶೀಲನೆ ನಡೆಸಿ ಎಂದು ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com