ಕೋವಿಡ್-19: ರಾಜ್ಯದಲ್ಲಿ ಗುಣಮುಖ ಪ್ರಮಾಣ ಶೇ.80.8ಕ್ಕೆ ಏರಿಕೆ
ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಒಂದೆಡೆ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚಳಗೊಳ್ಳುತ್ತಿರುವುದು ಕೊಂಚ ನಿರಾಳ ಎದುರಾಗುವಂತೆ ಮಾಡಿದೆ.
Published: 27th September 2020 01:28 PM | Last Updated: 27th September 2020 01:28 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಒಂದೆಡೆ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚಳಗೊಳ್ಳುತ್ತಿರುವುದು ಕೊಂಚ ನಿರಾಳ ಎದುರಾಗುವಂತೆ ಮಾಡಿದೆ.
ರಾಜ್ಯದಲ್ಲಿ ಶುಕ್ರವಾರದವರೆಗೂ ಒಟ್ಟಾರೆ 4,55,719 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಇದರೊಂದಿಗೆ ಗುಣಮುಖರ ಪ್ರಮಾಣ ಶೇ.80.81ಕ್ಕೆ ಏರಿಕೆಯಾಗಿದೆ. ಜುಲೈ.20ರವರೆಗೂ ಇದರ ಪ್ರಮಾಣ ಶೇ.35.29ರಷ್ಟಿತ್ತು. ಗುಣಮುಖರ ಪ್ರಮಾಣ 80.81ಕ್ಕೆ ಏರಿಕೆಯಾಗುವ ಮೂಲಕ ಸೋಂಕಿನಿಂದ ಗುಣಮುಖರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳಿಂದ ಬಿಡುಗಡೆಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನಕ್ಕೆ ಏರಿಕೆಯಾಗಿದೆ.
ಪಟ್ಟಿಯಲ್ಲಿ ಮಹಾರಾಷ್ಟ್ರ 9,92,806 ಜನರು ಆಸ್ಪತ್ರೆಯಲ್ಲಿ ಬಿಡುಗಡೆಗೊಂಡಿರುವುದರೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದು, 5,97,294ದೊಂದಿಗೆ ಆಂಧ್ರಪ್ರದೇಶ ಎರಡನೇ ಸ್ಥಾನ. 5,19,448 ದೊಂದಿಗೆ ತಮಿಳುನಾಡು ಮೂರನೇ ಸ್ಥಾನ ಪಡೆದುಕೊಂಡಿದೆ.
ಶೇಕಡಾ 60 ಕ್ಕಿಂತ ಕಡಿಮೆ ಚೇತರಿಕೆ ಪ್ರಮಾಣವನ್ನು ದಾಖಲಿಸುತ್ತಿದ್ದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇದೀಗ ಶೇಕಡಾ ಗುಣಮುಖರ ಪ್ರಮಾಣ ಶೇ. 75-80ರಷ್ಟಾಗಿದೆ.
ಜುಲೈ ತಿಂಗಳಿನಲ್ಲಿ, ಮೈಸೂರಿನಲ್ಲಿ ಚೇತರಿಕೆ ಪ್ರಮಾಣವು ಶೇಕಡಾ 33.5 ರಷ್ಟಿದ್ದರೆ, ಸೆಪ್ಟೆಂಬರ್ 25 ರ ವೇಳೆಗೆ ಶೇ.80.8ಕ್ಕೆ ಏರಿಕೆಯಾಗಿದೆ. ಬಳ್ಳಾರಿಯಲ್ಲಿ ಚೇತರಿಕೆ ಪ್ರಮಾಣವು ಶೇಕಡಾ 44 ರಷ್ಟಿತ್ತು, ಇದೀಗ ಶೇಕಡಾ 84.2 ಆಗಿದೆ. ದಕ್ಷಿಣ ಕನ್ನಡದಲ್ಲಿ ಶೇ.36.4ರಷ್ಟಿದ್ದ ಗುಣಮುಖರ ಪ್ರಮಾಣ ಇದೀಗ ಶೇ.74.3 ಕ್ಕೆ ತಲುಪಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶೇಕಡಾ 23.8 ರಷ್ಟಿದ್ದ ಚೇತರಿಕೆ ಪ್ರಮಾಣ ಇದೀಗ ಶೇ.79.0 ಕ್ಕೆ ಏರಿಕೆಯಾಗಿದೆ.
ಕೊರೋನಾ ಸೋಂಕು ಹರಡುತ್ತಿದ್ದ ಆರಂಭಿಕ ದಿನಗಳಲ್ಲಿ ಜನರು ಪರೀಕ್ಷೆಗೊಳಗಾಗಲು ಮುಂದಕ್ಕೆ ಬರುತ್ತಿರಲಿಲ್ಲ. ಭೀತಿಗೊಳಗಾಗಿದ್ದರು. ರೋಗಲಕ್ಷಣ ಉಲ್ಭಣಗೊಳ್ಳುವವರೆಗೂ ಪರೀಕ್ಷೆಗೊಳಗಾಗುತ್ತಿರಲಿಲ್ಲ. ಆದರೆ, ಇದೀಗ ರೋಗಲಕ್ಷಣವಿಲ್ಲದೇ ಇದ್ದರೂ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷೆಗೊಳಗಾಗುತ್ತಿದ್ದಾರೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಲಕ್ಷಣರಹಿತ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಷ್ಟು ಗುಣಮುಖರ ಪ್ರಮಾಣ ಕೂಡ ಏರಿಕೆಯಾಗುತ್ತದೆ ಎಂದು ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ನಾಗರಾಜ್ ಅವರು ಹೇಳಿದ್ದಾರೆ.
ನಾವು ಗಮನಿಸಿದ ಮತ್ತೊಂದು ವಿಚಾರ ಇದೆ, ಇತ್ತೀಚಿನ ದಿನಗಳಲ್ಲಿ ಸರ್ಕಾರದ ಮನೆಗಳು, ರಸ್ತೆಗಳನ್ನು ಸೀಲ್ಡೌನ್ ಮಾಡುವುದು, ಪೋಸ್ಟರ್ ಗಳನ್ನು ಅಂಟಿಸುವುದನ್ನು ನಿಲ್ಲಿಸಿದೆ. ಇದರಿಂದಾಗಿ ಸಾಮಾಜಿಕವಾಗಿ ಎದುರಾಗುವ ಕಳಂಕ ಭೀತಿ ಜನರಲ್ಲಿ ದೂರಾಗಿದೆ. ಹೀಗಾಗಿ ಪರೀಕ್ಷೆಗೊಳಗಾಗಲು ಮುಂದಾಗುತ್ತಿದ್ದಾರೆ. ಚಿಕಿತ್ಸೆಯ ನಿಯಮಗಳೂ ಕೂಡ ಬದಲಾಗಿದ್ದು, ರೆಮ್ಡೆಸಿವಿರ್ ನಂತಹ ಅನೇಕ ಔಷಧಿಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಚೇತರಿಕೆ ಪ್ರಮಾಣ ಏರಿಕೆಯಾಗಲು ಸಹಾಯವಾಗುತ್ತಿದೆ ಎಂದು ತಿಳಿಸಿದ್ದಾರೆ.