'ನನ್ನ ಮಗನಿಗೆ ವೃತ್ತಿಯಲ್ಲಿ ಸಿಕ್ಕಿದ ಯಶಸ್ಸು ಮುಳುವಾಗಿರಬಹುದು': ಆರೋಪಿ ವೀರೇಂದರ್ ಖನ್ನಾ ತಂದೆ ಅಭಿಪ್ರಾಯ

ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳೊಂದಿಗೆ ನಂಟು ಬೆಳೆಸಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ಭಾಗಿಯಾದ ಆರೋಪದ ಮೇಲೆ ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ವೀರೇಂದರ್ ಖನ್ನಾನ ಕುಟುಂಬಸ್ಥರು ಆತನ ವಿರುದ್ಧ ಪೊಲೀಸರು ಮಾಡುತ್ತಿರುವ ಆರೋಪವನ್ನು ಅಲ್ಲಗಳೆದಿದ್ದಾರೆ.
ವೀರೇಂದರ್ ಖನ್ನಾ
ವೀರೇಂದರ್ ಖನ್ನಾ

ಬೆಂಗಳೂರು: ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳೊಂದಿಗೆ ನಂಟು ಬೆಳೆಸಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ಭಾಗಿಯಾದ ಆರೋಪದ ಮೇಲೆ ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ವೀರೇಂದರ್ ಖನ್ನಾನ ಕುಟುಂಬಸ್ಥರು ಆತನ ವಿರುದ್ಧ ಪೊಲೀಸರು ಮಾಡುತ್ತಿರುವ ಆರೋಪವನ್ನು ಅಲ್ಲಗಳೆದಿದ್ದಾರೆ.

ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನ ಕಾಮರ್ಸ್ ವಿಭಾಗದ ಮಾಜಿ ಮುಖ್ಯಸ್ಥ, ವೀರೇಂದರ್ ಖನ್ನಾನ ತಂದೆ ಪ್ರೊ.ಎಸ್ ರಾಮ್ ಖನ್ನಾ, ನನ್ನ ಮಗ ಯಾವತ್ತೂ ಖಾಸಗಿ ಪಾರ್ಟಿಗಳನ್ನು, ಫಾರ್ಮ್ ಹೌಸ್ ನಲ್ಲಿ ಪಾರ್ಟಿಗಳನ್ನು ಆಯೋಜಿಸಿರಲಿಲ್ಲ. ಹೊಟೇಲ್ ಗಳು, ರೆಸಾರ್ಟ್ ಗಳು, ಪಬ್ ಗಳಲ್ಲಿ ಪಾರ್ಟಿ ಆಯೋಜನೆ ಮಾಡುವವರಿಗೆ ಪ್ರಚಾರ ಮಾಡುವ, ಜಾಹೀರಾತು ನೀಡುವ ಕೆಲಸವನ್ನಷ್ಟೇ ಮಾಡುತ್ತಿದ್ದ.ಪಾರ್ಟಿ ಆರಂಭವಾದ ಕೂಡಲೇ ನನ್ನ ಮಗನ ಕೆಲಸ ಅಲ್ಲಿಗೆ ಮುಕ್ತಾಯವಾಗುತ್ತಿತ್ತು, ನಂತರ ಪಾರ್ಟಿಗಳಲ್ಲಿ ಏನಾಗುತ್ತಿತ್ತು ಎಂಬುದು ಗೊತ್ತಾಗುತ್ತಿರಲಿಲ್ಲ, ನನ್ನ ಮಗ ಭಾಗಿಯಾಗುತ್ತಲೂ ಇರಲಿಲ್ಲ. ಆತನ ಕಂಪೆನಿ ದಾಖಲಾತಿ ಪಡೆದ ಕಂಪೆನಿಯಾಗಿದೆ, ನಿಗದಿತವಾಗಿ ಜಿಎಸ್ ಟಿ ಮತ್ತು ಆದಾಯ ತೆರಿಗೆ ಪಾವತಿ ಮಾಡಿಕೊಂಡು ಬರುತ್ತಿದ್ದ ಎಂದು ಹೇಳಿದ್ದಾರೆ.

2007ರಲ್ಲಿ ಕಾರ್ಯಕ್ರಮಗಳ ಆಯೋಜನೆ ವೃತ್ತಿ ಆರಂಭಿಸಿದ ವೀರೇಂದರ್ ಖನ್ನಾ ಕಂಪ್ಯೂಟರ್ ಎಂಜಿನಿಯರಿಂಗ್ ಪದವೀಧರ, ನಗರದಲ್ಲಿ ಪ್ರಮುಖ ಪಾರ್ಟಿ ಆಯೋಜಕನಾಗಿದ್ದ. ಸರಾಸರಿ ವಾರಕ್ಕೆ ಎರಡು ಪಾರ್ಟಿ ಆಯೋಜಿಸುತ್ತಿದ್ದ. ನನ್ನ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲದಿದ್ದರೂ ಆತನ ಯಶಸ್ಸೇ ಇಂದು ಆತನಿಗೆ ಮುಳುವಾಗಿದೆ ಎಂದು ಹೇಳಲು ಬಯಸುತ್ತೇನೆ. ಆತನಿಗೆ ಉದ್ಯಮದಲ್ಲಿ ಪೈಪೋಟಿ, ಪ್ರತಿಸ್ಪರ್ಧಿಗಳು ಸಾಕಷ್ಟು ಜನರಿದ್ದರು. ಅವರು ಆತನ ಕಾರ್ಯಕ್ರಮ ಆಯೋಜನೆಗೆ ಅಡ್ಡಿಪಡಿಸುತ್ತಿದ್ದರು ಎಂದು ಹೇಳುತ್ತಿದ್ದ. ಆತನ ಪ್ರತಿಸ್ಪರ್ಧಿಗಳು ಹಬ್ಬಿಸಿರುವ ವದಂತಿಗಳಿಂದ, ಮಾಡುತ್ತಿರುವ ಆರೋಪಗಳಿಂದ ನನ್ನ ಮಗನ ಮೇಲೆ ಏಕಪಕ್ಷೀಯವಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ ಎಂದು ನನಗೆ ಅನಿಸುತ್ತಿದೆ ಎಂದು ವೀರೇಂದರ್ ಖನ್ನಾ ತಂದೆ ಆರೋಪಿಸಿದ್ದಾರೆ.

ನನ್ನ ಮಗ ಕೂಡ ಈ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾನೆ ಎಂದು ಒತ್ತಾಯಪೂರ್ವಕವಾಗಿ ಹೇಳಿಕೆ ನೀಡುವಂತೆ ಆರ್ ಟಿಒ ಕ್ಲರ್ಕ್ ರವಿಶಂಕರ್ ಗೆ ಪೊಲೀಸರು ಒತ್ತಾಯ ಮಾಡಿದ್ದಾರೆ ಎಂದು ಕೂಡ ರಾಮ್ ಖನ್ನಾ ಆಪಾದಿಸಿದ್ದಾರೆ.

ಇತ್ತೀಚೆಗೆ ನಾನು ನನ್ನ ಮಗನನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಸಿಸಿಬಿಯವರು ಬಂಧಿಸಿರುವ ಆರೋಪಿಗಳಲ್ಲಿ ನಿನಗೆ ಯಾರಾದರೂ ಗೊತ್ತಿದೆಯೇ ಎಂದು ಕೇಳಿದ್ದೆ, ಆಗ ಅವನು ಇಲ್ಲ ಎಂದಿದ್ದರು. ಪೊಲೀಸರು ಒತ್ತಾಯಪೂರ್ವಕವಾಗಿ ಹೇಳಿಕೆ ನೀಡುವಂತೆ ಒತ್ತಡ ಹಾಕಿದರು ಎಂದು ರವಿಶಂಕರ್ ನನಗೆ ಹೇಳಿದ ಎಂದು ಮಗ ನನಗೆ ಹೇಳಿದನು. ನನ್ನ ಮಗನನ್ನು ಈ ಕೇಸಿನಲ್ಲಿ ಏಕೆ ಸಿಕ್ಕಿಸಿ ಹಾಕಿದರು ಎಂದು ನನಗೆ ಅಚ್ಚರಿಯಾಗುತ್ತಿದೆ ಎಂದು ರಾಮ್ ಖನ್ನಾ ಹೇಳಿದ್ದಾರೆ.

ಇನ್ನು ತನ್ನ ಮಗ ಕೊಠಡಿ ಹಂಚಿಕೊಂಡು ಉಳಿದುಕೊಂಡಿದ್ದ ಅಪಾರ್ಟ್ ಮೆಂಟ್ ನಲ್ಲಿ ಸಿಕ್ಕಿರುವ 6 ಗ್ರಾಂ ಗಾಂಜಾ ನನ್ನ ಮಗ ಸಂಗ್ರಹಿಸಿಟ್ಟುಕೊಂಡಿರಲಿಲ್ಲ. ಮತ್ತಿಬ್ಬರು ಅಪಾರ್ಟ್ ಮೆಂಟ್ ನಲ್ಲಿ ನನ್ನ ಮಗನ ಜೊತೆಗಿದ್ದರು. ಮತ್ತೊಂದು ಕೋಣೆಯಲ್ಲಿ ಫ್ರಾನ್ಸ್ ಮೂಲದ ಮಹಿಳೆ ಉಳಿದುಕೊಂಡಿದ್ದ ಕೊಠಡಿಯಲ್ಲಿ ಗಾಂಜಾ ಸಿಕ್ಕಿದೆ. ನಾವು ಅಗತ್ಯ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದೇವೆ ಎಂದು ರಾಮ್ ಖನ್ನಾ ಹೇಳಿದ್ದಾರೆ. ನನ್ನ ಮಗ ಡ್ರಗ್ಸ್ ಸೇವಿಸುವುದಾಗಲಿ, ಸಂಗ್ರಹಿಸಿಡುವುದಾಗಲಿ, ಪೂರೈಸುವುದಾಗಲಿ ಮಾಡಲಿಲ್ಲ ಎಂದು ತಂದೆ ಮಗನ ಬಗ್ಗೆ ವಿಶ್ವಾಸದಿಂದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com