ಸ್ವಾಮಿತ್ವ ಯೋಜನೆಯಡಿಯಲ್ಲಿ ಆಧಾರ್ ರೀತಿ ಶೀಘ್ರದಲ್ಲೇ ಗ್ರಾಮಸ್ಥರಿಗೆ ಪ್ರಾಪರ್ಟಿ ಕಾರ್ಡ್ ವಿತರಣೆ!
ಗ್ರಾಮೀಣ ಭಾಗದಲ್ಲಿ ತಲೆ ತಲಾಂತರಗಳಿಂದ ವಾಸಿಸುತ್ತಿದ್ದರೂ ತಮ್ಮ ಜಾಗದ ದಾಖಲೆಗಳನ್ನು ಹೊಂದಿರದವರಿಗೆ ಹಕ್ಕುಪತ್ರ ನೀಡುವ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸ್ವಾಮಿತ್ವ ಯೋಜನೆ ರಾಜ್ಯದಲ್ಲಿಯೂ ಆರಂಭವಾಗಲಿದ್ದು, ಯೋಜನೆ ಅಡಿಯಲ್ಲಿ ಆಧಾರ್ ರೀತಿ ಸರ್ಕಾರ ಪ್ರಾಪರ್ಟಿ ಕಾರ್ಡ್ ವಿತರಿಸಲಿದೆ ಎಂದು ತಿಳಿದುಬಂದಿದೆ.
Published: 30th September 2020 02:44 PM | Last Updated: 30th September 2020 03:17 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಗ್ರಾಮೀಣ ಭಾಗದಲ್ಲಿ ತಲೆ ತಲಾಂತರಗಳಿಂದ ವಾಸಿಸುತ್ತಿದ್ದರೂ ತಮ್ಮ ಜಾಗದ ದಾಖಲೆಗಳನ್ನು ಹೊಂದಿರದವರಿಗೆ ಹಕ್ಕುಪತ್ರ ನೀಡುವ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸ್ವಾಮಿತ್ವ ಯೋಜನೆ ರಾಜ್ಯದಲ್ಲಿಯೂ ಆರಂಭವಾಗಲಿದ್ದು, ಯೋಜನೆ ಅಡಿಯಲ್ಲಿ ಆಧಾರ್ ರೀತಿ ಸರ್ಕಾರ ಪ್ರಾಪರ್ಟಿ ಕಾರ್ಡ್ ವಿತರಿಸಲಿದೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ ಈ ಸ್ವಾಮಿತ್ವ ಯೋಜನೆಯು ಕಂದಾಯ ಇಲಾಖೆ ಮತ್ತು ಭಾರತೀಯ ಸರ್ವೇಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಯಲಿದ್ದು, ಈ ಇಲಾಕೆಯು ಡ್ರೋಣ್ ಮೂಲಕ ಸಮೀಕ್ಷೆ ನಡೆಸಲಿದೆ. ಬಳಿಕ ಪಂಚಾಯತ್ ರಾಜ್ ಇಲಾಖೆ ಮತ್ತು ರಾಜ್ಯದ ಕಂದಾಯ ಇಲಾಖೆಯ ಅಧಿಕಾರಿಗಳು ಪ್ರತೀ ಮನೆಯಲ್ಲಿ ಸರ್ವೇ ನಡೆಸಲಿದ್ದಾರೆ.
ಆರ್‌ಡಿಪಿಆರ್‌ನ ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತೀಖ್ ಮಾತನಾಡಿ, ಇಲ್ಲಿಯವರೆಗೂ ಯಾವುದೇ ಅಧಿಕೃತ ಆಸ್ತಿ ಪ್ರಮಾಣಪತ್ರಗಳನ್ನು ನೀಡಲಿಲ್ಲ. ಇದೀಗ ತಂತ್ರಜ್ಞಾನ ಬಳಕೆ ಮಾಡಿಕೊಂಡು ಸ್ವಾಮಿತ್ವ ಯೋಜನೆಯಡಿ ಸಮೀಕ್ಷೆ ನಡೆಸಲಾಗುತ್ತದೆ. ಸಮೀಕ್ಷೆ ಬಳಿಕ ಮಾಹಿತಿಗಳನ್ನು ದಾಖಲಿಸಿಕೊಂಡು, ಕಾರ್ಡ್'ಗಳನ್ನು ವಿತರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯು ಸರ್ವೇ ಆಫ್ ಇಂಡಿಯಾ ನೇತೃತ್ವದಲ್ಲಿ ಸ್ವಾಮಿತ್ವ (ಸರ್ವೇ ಆಫ್ ವಿಲೇಜಸ್ ಆ್ಯಂಡ್ ಮ್ಯಾಪಿಂಗ್ ವಿತ್ ಇಂಪ್ರೊವೈಸ್ಡ್ ಟೆಕ್ನಾಲಜಿ ಇನ್ ವಿಲೇಜಸ್ ಏರಿಯಾ) ಯೋಜನೆ ರೂಪಿಸಿದೆ. ಕರ್ನಾಟಕ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ.
ಮೊದಲ ಹಂತದಲ್ಲಿ ರಾಜ್ಯದ 5 ಜಿಲ್ಲೆಗಳ 83 ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ರಾಜ್ಯದ ಪೈಲಟ್ ಯೋಜನೆಯಾಗಿ ರಾಮನಗರ ತಾಲ್ಲೂಕಿನ ಗೋಪಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ 6 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಾಗಡಿ ತಾಲ್ಲೂಕಿನ ಕಾಳಾರಿ ಕಾವಲ್/ಹೊಸಪಾಳ್ಯ ಗ್ರಾಮ ಪಂಚಾಯಿತಿಯ 7 ಗ್ರಾಮಗಳನ್ನು ಎರಡನೇ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. 13 ಗ್ರಾಮಗಳಿಂದ ಸುಮಾರು 5 ಸಾವಿರ ಆಸ್ತಿಗಳನ್ನು ಆಸ್ತಿಗಳನ್ನು ಭೂಮಾಪನ ಮಾಡಿ ಅಕ್ಟೋಬರ್ 11 ರಂದು ಪ್ರಾಪರ್ಟಿ ಕಾರ್ಡ್ ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಾಪರ್ಟ್ ಕಾರ್ಡ್'ಗಳು ಆಧಾರ್ ರೀತಿ ವಿಶಿಷ್ಯ ಸಂಖಅಯೆಗಳನ್ನು ಹೊಂದಿರುತ್ತದೆ. ಇದರಿಂದ ನಕಲು ಮಾಡಲು ಸಾಧ್ಯವಾಗುವುದಿಲ್ಲ. ಗ್ರಾಮ ಪಂಚಾಯಿತಿಗಳೂ ಕೂಡ ನಿಖರವಾದ ಮಾಹಿತಿಗಳನ್ನು ಪಡೆಯಲಿದ್ದು, ಅದರ ಅನುಸಾರ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಸಹಾಯಕವಾಗಲಿದೆ. ಇದರಿಂದ ತೆರಿಗೆ ವಂಚಕರನ್ನೂ ಕೂಡ ಸುಲಭವಾಗಿ ಗುರುತಿಸಬಹುದು ಎಂದು ಅತೀಖ್ ಅವರು ತಿಳಿಸಿದ್ದಾರೆ.
2021 ರ ಮಾರ್ಚ್ ಅಂತ್ಯದ ವೇಳೆಗೆ 1,950 ಹಳ್ಳಿಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ. ಆಸ್ತಿ ಮಾರಾಟ ಮಾಡುವ ವೇಳೆ ಈ ಕಾರ್ಡ್ ಸಹಾಯ ಮಾಡಲಿದೆ ಎಂದು ಆರ್‌ಡಿಪಿಆರ್‌ನ ಅಧಿಕೃತ ಮೂಲಗಳು ತಿಳಿಸಿವೆ.
ವಿಶಿಷ್ಟ ಗುರುತಿನ ಸಂಖ್ಯೆಯು ಆಸ್ತಿಯ ಆಯಾಮ, ಮೂಲ ಮಾಲೀಕರು, ತೆರಿಗೆ ಪಾವತಿಸಿದಂತಹ ವಿವರಗಳು ಮತ್ತು ಸ್ಥಳದ ಕುರಿತು ನಿಖರ ಮಾಹಿತಿ ನೀಡಲಿದೆ. ಸ್ವಾಮಿತ್ವಾ ಯೋಜನೆಯ ಮೂಲಕ, ಆಸ್ತಿ ವಿವಾದಗಳು ಮತ್ತು ಕಾನೂನು ಪ್ರಕರಣಗಳೂ ಕೂಡ ಕಡಿಮೆಯಾಗಲಿದೆ ಎಂದಿದ್ದಾರೆ.