ಸಭೆ-ಸಮಾರಂಭಕ್ಕೆ ನೂರು ಜನ ಸೀಮಿತ; ಕೊರೋನಾ ಸೂಚನೆ ನಿರ್ಲಕ್ಷಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಡಾ. ಕೆ.ಸುಧಾಕರ್
ಕೊರೋನಾ ನಿಯಂತ್ರಣ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
Published: 30th September 2020 07:57 PM | Last Updated: 30th September 2020 07:58 PM | A+A A-

ಕೆ ಸುಧಾಕರ್
ಬೆಂಗಳೂರು: ಕೊರೋನಾ ನಿಯಂತ್ರಣ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ತಜ್ಞರು ಹಾಗೂ ಹಿರಿಯ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಸ್ಕ್ ಧರಿಸದ, ಭೌತಿಕ ಅಂತರ ಕಾಯ್ದುಕೊಳ್ಳದ, ಸಭೆ-ಸಮಾರಂಭ ನೆಪದಲ್ಲಿ ಜನದಟ್ಟಣೆಗೆ ಅವಕಾಶ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಒಂದೆರಡು ದಿನದಲ್ಲಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದರು.
ಲಾಕ್ ಡೌನ್ ತೆರವು ಬಳಿಕ ಕಳೆದೆರಡು ತಿಂಗಳಿಂದ ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರು ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈಗಿರುವ ಏಕೈಕ ಮಾರ್ಗವೆಂದರೆ ಕಠಿಣ ಕಾನೂನು ಜಾರಿಗೆ ತರುವುದು. ಸರಕಾರದ ಮಾರ್ಗಸೂಚಿ ಅನುಸರಿಸದವರ ವಿರುದ್ದ ಕಠಿಣ ಶಿಕ್ಷೆ ಹಾಗೂ ದಂಡ ಪ್ರಯೋಗ ಅನಿವಾರ್ಯ ಎಂದರು.
ಇತ್ತೀಚೆಗೆ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಸಭೆ ಸಮಾರಂಭಗಳು ಹೆಚ್ಚಾಗಿದ್ದು,ಜನರು ಗುಂಪುಗೂಡಿ ಭಾಗ ವಹಿಸುತ್ತಿದ್ದಾರೆ. ಇದರಿಂದ ಸೋಂಕು ವೇಗವಾಗಿ ಹರಡುತ್ತಿರುವುದು ಗಮನಕ್ಕೆ ಬಂದಿದೆ. ಇಂಥ ಸಮಾರಂಭಗಳಿಗೆ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ. ಸೋಂಕು ಹೆಚ್ಚಿರುವ ಜಿಲ್ಲಾಡಳಿತಗಳ ಜೊತೆ ಸಮಾಲೋಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ತಜ್ಞರು ಮತ್ತು ಅಧಿಕಾರಿಗಳು ಕೆಲ ಸಲಹೆಗಳನ್ನು ನೀಡಿದ್ದಾರೆ ಎಂದು ವಿವರಿಸಿದರು.