ರಾಜ್ಯದಲ್ಲಿ ಕೋವಿಡ್ ರೋಗಿಗಳ ಸಾವಿನ ಪ್ರಮಾಣ ಏರಿಕೆ: ಕೊರೋನಾ 2ನೇ ಅಲೆ ಕುರಿತು ಆತಂಕವೂ ಹೆಚ್ಚಳ!

ರಾಜ್ಯದಲ್ಲಿ ಕೊರೋನಾದಿಂದ ಉಂಟಾಗುತ್ತಿರುವ ಸಾವಿನ ಪ್ರಮಾಣ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಕೊರೋನಾ 2ನೇ ಅಲೆ ಕುರಿತ ಆತಂಕ ದ್ವಿಗುಣಗೊಳ್ಳುವಂತೆ ಮಾಡಿದೆ. 

Published: 07th April 2021 01:39 PM  |   Last Updated: 07th April 2021 01:41 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ರಾಜ್ಯದಲ್ಲಿ ಕೊರೋನಾದಿಂದ ಉಂಟಾಗುತ್ತಿರುವ ಸಾವಿನ ಪ್ರಮಾಣ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಕೊರೋನಾ 2ನೇ ಅಲೆ ಕುರಿತ ಆತಂಕ ದ್ವಿಗುಣಗೊಳ್ಳುವಂತೆ ಮಾಡಿದೆ. 

ಜನವರಿ 5 ರಿಂದ ಏಪ್ರಿಲ್ 5 ರವರೆಗಿನ ಕೋವಿಡ್ ಸಾವಿನ ಅಂಕಿಅಂಶಗಳನ್ನು ಹೋಲಿಕೆ ಮಾಡಿದರೆ, ಮರಣ ಪ್ರಮಾಣದಲ್ಲಿ ಭಾರೀ ಏರಿಕೆಯಾಗುತ್ತಿರುವುದು ಕಂಡು ಬರುತ್ತಿದೆ. 

ಕಳೆದ ಒಂದು ತಿಂಗಳಿನಲ್ಲೇ ರಾಜ್ಯದಲ್ಲಿ ಬರೋಬ್ಪರಿ 298 ಮಂದಿ ಸಾವನ್ನಪ್ಪಿದ್ದು, ಜನರು ಬಹಳ ಎಚ್ಚರದಿಂದ ಇರಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. 

ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ ಜನವರಿ 5 ರಿಂದ ಫೆಬ್ರವರಿ 5 ರವರೆಗೆ 112 ಮತ್ತು ಫೆಬ್ರವರಿ 6 ರಿಂದ ಮಾರ್ಚ್ 5 ರವರೆಗೆ 121, ಮಾರ್ಚ್ 6 ರಿಂದ ಏಪ್ರಿಲ್ 5 ರವರೆಗೆ 298 ಕೋವಿಡ್ ಸಾವುಗಳು ಸಂಭವಿಸಿದೆ ಎಂದು ತಿಳಿಸಿದೆ. 

ಕಳೆದ ತಿಂಗಳಿನಲ್ಲಿ ಸಂಭವಿಸಿದ ಸಾವುಗಳು ಐಎಲ್ಐ ಮತ್ತು ಸಾರಿ ರೋಗಲಕ್ಷಣಗಳೊಂದಿಗೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ದೀರ್ಘಕಾಲದ ರೋಗಗಳಿಂದ ಬಳಲುತ್ತಿರುವ 40-90 ವಯಸ್ಸಿನ ಅಂತರವುಳ್ಳವರೇ ಹೆಚ್ಚಾಗಿರುವುದು ಕಂಡು ಬಂದಿದೆ. 

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಡಾ. ಹೆಚ್.ಎಂ. ಪ್ರಸನ್ನ ಅವರು ಮಾತನಾಡಿ, ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಸಂಖಅಯೆ ಹೆಚ್ಚಿಸಲಾಗುತ್ತಿದೆ. ಆದರೆ, 2ನೇ ಅಲೆ ಅನಿರೀಕ್ಷಿತವೆಂದು ತೋರುತ್ತಿದೆ. ಆದ್ದರಿಂದ ಜನರು ಅತೀ ಹೆಚ್ಚು ಎಚ್ಚರಿಕೆಯಿಂದಿರಬೇಕಿದೆ ಎಂದು ಹೇಳಿದ್ದಾರೆ. 

ಸೋಂಕು ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಆಸ್ಪತ್ರೆಗಳು ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಇಳಿಕೆ ಮಾಡಿತ್ತು. ಇದೀಗ ಮರಳಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ಈ ಬಾರಿ ಹರಡುತ್ತಿರುವ ಸೋಂಕು ಎಲ್ಲಾ ವಯಸ್ಸಿನವರ ಮೇಲೆ ಪರಿಣಾಮ ಬೀರುತ್ತಿದೆ. ಮೊದಲ ಅಲೆಗಿಂತಲೂ ಈ ಬಾರಿ ಹೆಚ್ಚಿನ ಸಾವು ಸಂಭವಿಸುತ್ತಿವೆ. ಪ್ರಮುಖವಾಗಿ ವಯಸ್ಕರು ಹೆಚ್ಚಾಗಿ ಸಾವನ್ನಪ್ಪುತ್ತಿರುವುದು ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ. 

ಇದಷ್ಟೇ ಅಲ್ಲದೆ, ಲಕ್ಷಣಗಳೂ ಕೂಡ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ನೆಗಡಿ, ತಲೆನೋವು, ಅತಿಸಾರ, ಹೊಟ್ಟೆ ನೋವಿನಿಂದ ಬಳಲುತ್ತಿರುವವರು ಪರೀಕ್ಷೆಗೊಳಪಡುತ್ತಿಲ್ಲ. ತಡವಾಗಿ ಪರೀಕ್ಷೆಗೊಳಗಾಗುತ್ತಿರುವುದರಿಂದ ಸೋಂಕು ಹೆಚ್ಚಾಗಿ ಹರಡುತ್ತಿದೆ. 

ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಜನರಿಗೆ ಲಕ್ಷಣಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಡವಾಗಿ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಿದರು ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. 

ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾಗಿರುವ ಗಿರಿಧರ್ ಬಾಬು ಅವರು ಮಾತನಾಡಿ, ಆಸ್ಪತ್ರೆಗಳಲ್ಲಿ ಹೆಚ್ಚೆಚ್ಚು ಜನರು ಸೇರದಂತೆ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ. ಸೋಂಕು ನಿಯಂತ್ರಿಸಲು ಜನರು ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಬೇಕಿದೆ ಎಂದು ಹೇಳಿದ್ದಾರೆ. 

ಸಚಿವ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಕೋವಿಡ್'ಗೆ ಮಧ್ಯ ವಯಸ್ಕರು ಸಾವಿಗೀಡಾಗುವ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಮರಣ ವಿಶ್ಲೇಷಣೆ ನಡೆಸುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ. 

ಕೋವಿಡ್'ಗೆ ರಾಜ್ಯದಲ್ಲಿ 25 ವರ್ಷ ವಯಸ್ಸಿನವರ ಸಾವು ಸಂಭವಿಸುತ್ತಿರುವುದು ಕಂಡು ಬಂದಿದೆ. ಇದು ಆತಂಕಕಾರಿ ವಿಚಾರ. ಮಧ್ಯ ವಯಸ್ಕರಲ್ಲೇ ಸಾವು ಹೆಚ್ಚಳ ಏಕೆ ಆಗುತ್ತಿದೆ ಎಂಬ ನಿಖರ ಕಾರಣ ತಿಳಿಯಲು ಮರಣ ವಿಶ್ಲೇಷಣೆಯಿಂದ ಸಾಧ್ಯ ಎಂದು ತಿಳಿಸಿದ್ದಾರೆ. 

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp