
ಸಾಂದರ್ಭಿಕ ಚಿತ್ರ
ಬೆಂಗಳೂರು: ಅನುದಾನ ರಹಿತ ಮತ್ತು ಅನುದಾನ ಸಹಿತ ಖಾಸಗಿ ಶಾಲೆಗಳಲ್ಲಿ ಸರಾಸರಿ ಶೇ. 36 ರಷ್ಟು ಆರ್ ಟಿ ಇ ಸೀಟುಗಳು ಉಪಯೋಗವಾಗದೇ ಹಾಗೆಯೇ ಉಳಿದಿವೆ.
ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರ ಇರುವ 14,036 ಸೀಟುಗಳ ಪೈಕಿ ಕೇವಲ 8,980 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ, ಉತ್ತರ ಕನ್ನಡ, ಮಧುಗಿರಿ, ಕೊಡಗು, ಬೀದರ್, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೇವಲ ಕೆಲವೇ ಅರ್ಜಿಗಳು ಮಾತ್ರ ಬಂದಿವೆ.
ಉತ್ತರ ಕನ್ನಡದಲ್ಲಿ ಇರುವ 11 ಸೀಟುಗಳಗೆ ಕೇವಲ ಒಂದೇ ಒಂದು ಅರ್ಜಿ ಬಂದಿದೆ. ಆದರೆ ಬೆಂಗಳೂರು ದಕ್ಷಿಣ ವಲಯದಲ್ಲಿ ಇರುವ ಸೀಟಿಗಿಂತ ಅಧಿಕ ಸಂಖ್ಯೆಯ ಅರ್ಜಿಗಳು ಬಂದಿವೆ, 734 ಸೀಟುಗಳಿಗೆ 2,179 ಅರ್ಜಿಗಳನ್ನು ಹಾಕಲಾಗಿದೆ. ಮೈಸೂರು, ಧಾರವಾಡ, ಬೆಂಗಳೂರು ಉತ್ತರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶೇ. 90 ರಷ್ಟು ಅಪ್ಲಿಕೇಷನ್ಸ್ ಬಂದಿವೆ.
ಕೊರೋನಾ ಸಾಂಕ್ರಾಮಿಕ ರೋಗದ ಕಾರಣ ಆರ್ಥಿಕ ತೊಂದರೆಯಿಂದಾಗಿ ,ಸರ್ಕಾರಿ ಶಾಲೆಗಳಿಗೆ ಸೇರುವವರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಆರ್ ಟಿಇ ಸೀಟುಗಳಿಗೆ ಅರ್ಜಿ ಹಾಕುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಹೇಳಿದ್ದಾರೆ.
ಅನುದಾನ ಸಹಿತ ಶಾಲೆಗಳಿಗೆ ಕಳುಹಿಸುವ ಬದಲು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವುದು ಉತ್ತಮ ಎಂದು ಪೋಷಕರು ಭಾವಿಸುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವುದರಿಂದ ಆರ್ಥಿಕ ಹೊರೆ ಎಂದು ಪೋಷಕರ ಅಭಿಪ್ರಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದರ ಜೊತೆಗೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಡುತ್ತಿರುವುದು ಖಾಸಗಿ ಶಾಲೆಗಳೆಡೆಗಿನ ಆಕರ್ಷಣೆ ಕಡಿಮೆಯಾಗಲು ಕಾರಣವಾಗಿದೆ. ಸರ್ಕಾರಿ ಶಾಲೆಗಳ ಸೌಲಭ್ಯ, ಮೂಲಭೂತ ಸೌಕರ್ಯ ಶಿಕ್ಷಕರ ಸೌಲಭ್ಯ ಮುಂತಾದ ಕಾರಣದಿಂದ ಆರ್ ಟಿ ಇ ಅರ್ಜಿಗಳು ಕಡಿಮೆಯಾಗಿವೆ ಎಂದು ಅವರು ಹೇಳಿದ್ದಾರೆ.
ಕೊರೋನಾ ಕಾರಣದಿಂದಾಗಿ ಮಕ್ಕಳು ಶಾಲೆಯಿಂದ ಹೊರಗುಳಿದ ಕಾರಣ ಹಾಗೂ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಒಪ್ಪದ ಕಾರಣ ಈ ವರ್ಷ ಆರ್ ಟಿ ಇ ಅರ್ಜಿಗಳು ಕಡಿಮೆ ಬಂದಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಅನ್ಬುಕುಮಾರ್ ಹೇಳಿದ್ದಾರೆ.
ಈ ವರ್ಷ ಪ್ರವೇಶದಲ್ಲಿ ಯಾವುದೇ ದೊಡ್ಡ ಮಟ್ಟದ ಕಡಿತ ಕಂಡುಬಂದಿಲ್ಲ. ವಲಸೆ ಬಂದ ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು, ಹಾಗೂ ಅರ್ಹರಿಗೆ ಪ್ರವೇಶ ನೀಡುವ ಹಿನ್ನೆಲೆಯಲ್ಲಿ ಮಾರ್ಚಿ 30ರವರೆಗೂ ವಿಸ್ತರಿಸಲಾಗಿತ್ತು ಎಂದು ಹೇಳಿದ್ದಾರೆ.