ಶೇ.10ರಷ್ಟು ವೇತನ ಪರಿಷ್ಕರಣೆಗೆ ಸಿದ್ದ, ಹಠ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ: ಸಾರಿಗೆ ನೌಕರರಿಗೆ ಅಂಜುಂ ಪರ್ವೇಜ್ ಮನವಿ

ಸಾರಿಗೆ ನೌಕರರು ತಮ್ಮ ಹಠ ಬಿಟ್ಟು ಕರ್ತವ್ಯಕ್ಕೆ ಬರಬೇಕು. ನಾವು ಈಗಲೂ ಅವರೊಂದಿಗೆ ಮಾತುಕತೆಗೆ ಸಿದ್ದ. ತಕ್ಷಣ ಮಧ್ಯಂತರ ಪರಿಹಾರವಾಗಿ ಶೇ.10ರಷ್ಟು ವೇತನ ಪರಿಷ್ಕರಣೆಗೆ ನಾವು ಸಿದ್ದ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾರಿಗೆ ನೌಕರರು ತಮ್ಮ ಹಠ ಬಿಟ್ಟು ಕರ್ತವ್ಯಕ್ಕೆ ಬರಬೇಕು. ನಾವು ಈಗಲೂ ಅವರೊಂದಿಗೆ ಮಾತುಕತೆಗೆ ಸಿದ್ದ. ತಕ್ಷಣ ಮಧ್ಯಂತರ ಪರಿಹಾರವಾಗಿ ಶೇ.10ರಷ್ಟು ವೇತನ ಪರಿಷ್ಕರಣೆಗೆ ನಾವು ಸಿದ್ದ. ನಂತರ ಉಳಿದ ಶೇ.2ರಷ್ಟು ನಂತರದ ದಿನಗಳಲ್ಲಿ ಹೆಚ್ಚಿಸಬಹುದು ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ ಮನವಿ ಮಾಡಿದ್ದಾರೆ.

ಸಾರಿಗೆ ನೌಕರರ ಮುಷ್ಕರ ಹಿನ್ನಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಂಜುಂ ಪರ್ವೇಜ್, ಕೋವಿಡ್ ಲಾಕ್ ಡೌನ್ ಸಮಯದಲ್ಕೂ ಸಹ ವೇತನ ಪಾವತಿ ನಿಲ್ಲಿಸಿಲ್ಲ. ಈಗಲೂ ವೇತನ ಪರಿಷ್ಕರಣೆಗೆ ಸರ್ಕಾರ ಸಿದ್ದವಿದೆ. ಆದರೆ ಘೋಷಣೆ ಮಾಡಲು ಇದು ಸಮಯವಲ್ಲ‌. ನಮ್ಮ ಮಾತಿಗೆ ಬೆಲೆ ಕೊಡದೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈಗ ಸಾರಿಗೆ ಇಲಾಖೆಯಿಂದ 21,000ಕ್ಕೂ ಹೆಚ್ಚು ಖಾಸಗಿ ಬಸ್ ಮತ್ತು ಮ್ಯಾಕ್ಸಿ ಕ್ಯಾಬ್ ಸೇವೆ ಒದಗಿಸಿದ್ದೇವೆ‌. ಯಾವುದೇ ಕಾರಣಕ್ಕೂ ಆರನೇ ವೇತನ ಆಯೋಗದ‌ ಶಿಫಾರಸ್ಸು ಸಾಧ್ಯವಿಲ್ಲ. ಯಾರು ಪ್ರತಿಭಟನೆ ಮಾಡುತ್ತಿದ್ದಾರೆಯೋ, ಪ್ರಚೋದನೆ ಮಾಡಿದ್ದಾರೆಯೋ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ದಿನಕ್ಕೆ 2, ಕೋಟಿ ನಷ್ಟವಾಗುತ್ತಿದೆ‌. ಈಗಾಗಲೇ 40 ಕೋಟಿ ನಷ್ಟವಾಗಿದೆ. ಹಾಗಾಗಿ ನೌಕರರು ತಮ್ಮ ಹಠ ಬಿಟ್ಟು ಕರ್ತವ್ಯಕ್ಕೆ ಬರಬೇಕು. ನಾವು ಈಗಲೂ ಅವರೊಂದಿಗೆ ಮಾತುಕತೆಗೆ ಸಿದ್ದ ಎಂದರು. 

ಸಾರಿಗೆ ನೌಕರರ ಮುಷ್ಕರ ಹೊಸದೇನಲ್ಲ‌. ಆಡಳಿತ ಮಂಡಳಿ ಹಾಗೂ ನೌಕರರ ಘರ್ಷಣೆ ಹೊಸದೇನಲ್ಲ. ಆದರೆ ಇದೇ ಮೊದಲ ಬಾರಿಗೆ ನೌಕರರು ಬಿಗಿಪಟ್ಟು ಹಿಡಿದು ಕೂತಿದ್ದಾರೆ‌ ಸಾರಿಗೆ ನೌಕರರ ಮುಷ್ಕರದಿಂದ ಜನರಿಗೆ ಅನಾನುಕೂಲವಾಗಿದೆ‌. ಪೂರ್ಣ ಪ್ರಮಾಣದಲ್ಲಿ ಪರ್ಯಾಯ ವ್ಯವಸ್ಥೆ ಸಾಧ್ಯವಾಗದೇ ಇದ್ದರು ಭಾಗಶಃ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ. ನಮ್ಮ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

ಕಳೆದ ಡಿಸೆಂಬರ್, ಫೆಬ್ರವರಿ ಮಾರ್ಚ್ ನಲ್ಲಿಯೂ ನೌಕರರ ಸಂಘಟನೆಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೇವೆ. ಸಾರಿಗೆ ವಿಭಾಗಗಳಲ್ಲಿ 20,000 ಬಸ್ ಗಳಿವೆ. ದಿನ ನಿತ್ಯ 40 ಲಕ್ಷ ಜನ ಪ್ರಯಾಣ ಮಾಡುತ್ತಾರೆ. ಸರ್ಕಾರಿ ನೌಕರರಿಗೆ ನೀಡಲಾಗುವ ಆರನೇ ವೇತನ ಆಯೋಗದ ಶಿಫಾರಸ್ಸಿಗೆ ಸರಿ ಸಮನಾದ ವೇತನ ನೀಡಲು ಸಾಧ್ಯವಿಲ್ಲ. ಆದರೆ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ವೇತನ ಪರಿಷ್ಕರಣೆ ಮಾಡುವುದಾಗಿ ಮಾತುಕೊಟ್ಟಿದ್ದೇವೆ‌. 

ಕಳೆದ ವರ್ಷ ಜನವರಿಯಲ್ಲಿಯೇ ವೇತನ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಲಾಗಿತ್ತು‌. ಆದರೆ ಕೋವಿಡ್ ಕಾರಣದಿಂದ ಸ್ಥಗಿತವಾಗಿತ್ತು. ಈ ಮೊದಲೂ ಸಹ ಆಯಾ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಶೆ.5ರಿಂದ ಶೇ 10ರಷ್ಟು ವೇತನ ಹೆಚ್ಚಳ ಮಾಡಲಾಗಿದೆ‌. ಈಗಾಗಲೇ ಸರ್ಕಾರ ಒಪ್ಪಿಕೊಂಡು ಈಡೇರಿಸಿರುವ ಎಂಟು ಬೇಡಿಕೆಗಳು ದೊಡ್ಡಮಟ್ಟದ್ದೇ ಆಗಿದೆ.
ವೇತನ ಪರಿಷ್ಕರಣೆ ಸಂಬಂಧ ಸಾರಿಗೆ ಸಚಿವರು ಕೂಡ ಸಾರಿಗೆ ನೌಕರರ ಸಂಘಟನೆಗಳ ಜತೆ ಸುಮಾರು ಎರಡೂವರೆ ಗಂಟೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಅಂಜುಂ ಪರ್ವೇಜ್ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com