ಕೊರೋನಾ ಆರ್ಭಟ: ಪ್ರಧಾನಿ ಮೋದಿ ಜೊತೆ ಸಿಎಂ ಯಡಿಯೂರಪ್ಪ ಮಾತುಕತೆ, ಬೆಂಗಳೂರಿನಲ್ಲಿ ಕಠಿಣ ಕ್ರಮ ಸಾಧ್ಯತೆ
ರಾಜ್ಯದಲ್ಲಿ ಅದರಲ್ಲಿಯೂ ಬೆಂಗಳೂರಿನಲ್ಲಿ ಕೋವಿಡ್-19ರ ಎರಡನೇ ಅಲೆ ತೀವ್ರವಾಗುತ್ತಿದ್ದು, ಈ ನಡುವಲ್ಲೇ ಸೋಂಕು ನಿಯತ್ರಿಸಲು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಗುರುವಾರ ವಿಡಿಯೋ ಸಂವಾದ ನಡೆಸಲಿದ್ದಾರೆ.
Published: 08th April 2021 10:40 AM | Last Updated: 08th April 2021 01:23 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಅದರಲ್ಲಿಯೂ ಬೆಂಗಳೂರಿನಲ್ಲಿ ಕೋವಿಡ್-19ರ ಎರಡನೇ ಅಲೆ ತೀವ್ರವಾಗುತ್ತಿದ್ದು, ಈ ನಡುವಲ್ಲೇ ಸೋಂಕು ನಿಯತ್ರಿಸಲು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಗುರುವಾರ ವಿಡಿಯೋ ಸಂವಾದ ನಡೆಸಲಿದ್ದಾರೆ.
ಸಭೆ ಬಳಿಕ ದೇಶದಾದ್ಯಂತ ಕೋವಿಡ್ ನಿಯಂತ್ರಣಕ್ಕೆ ಕಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇತರರು ಪಾಲ್ಗೊಂಡು ಕರ್ನಾಟಕದಲ್ಲಿ ಅನುಸರಿಸಿರುವ ಮಾರ್ಗೋಪಾಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸಭೆ ಬಳಿಕ ಬೆಂಗಳೂರಿನಲ್ಲಿ ಕಠಿಣ ಕ್ರಮ ಕೈಗೊಳ್ಳುವ ಕುರಿತು ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.
ಸಂಜೆ 6.30ಕ್ಕೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಿಂದ ಯಡಿಯೂರಪ್ಪ ವಿಡಿಯೋ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಮುಖ್ಯಮಂತ್ರಿಗಳು ಈಗಾಗಲೇ ಎಲ್ಲಾ ಜಿಲ್ಲಾಡಳಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೂಡ ಜಿಲ್ಲಾಡಳಿತಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಲಸಿಕೆ ಹಾಕುತ್ತಿರುವ ವಿಸ್ತೃತ ವರದಿಯನ್ನೂ ಕೂಡ ಪ್ರಧಾನಿ ಮೋದಿಯವರ ಮುಂದೆ ಮಂಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಜೊತೆಗಿನ ಸಭೆಗೂ ಮುನ್ನ ಆರೋಗ್ಯ ಸಚಿವ ಸುಧಾಕರ್ ಅವರು ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಎಲ್ಲವನ್ನೂ ಕ್ರೋಡೀಕರಿಸಿ ಪ್ರಧಾನಿಗೆ ಮಾಹಿತಿ ನೀಡಲಾಗುತ್ತದೆ. ನಂತರ ಪ್ರಧಾನಿಗಳು ಕೋವಿಡ್ ನಿಯಂತ್ರಣಕ್ಕೆ ಕೆಲವೊಂದು ಕಠಿಣ ಕ್ರಮಗಳ ಜಾರಿ ಕುರಿತು ಸೂಚನೆ ನೀಡುವ ಸಾಧ್ಯತೆ ಇದೆ. ಪ್ರಧಾನಿಗಳೊಂದಿಗೆ ಸಭೆಯ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ಮೋದಿಯವರೊಂದಿಗೆ ನಡೆದ ವಿಡಿಯೋ ಸಂವಾದದ ವೇಳೆ ಯಾವುದೇ ನಿರ್ಬಂಧಗಳಿಲ್ಲದೆ ಎಲ್ಲಾ ವಯಸ್ಕರಿಗೂ ಲಸಿಕೆ ನೀಡಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಆರೋಗ್ಯ ಸಚಿವ ಹರ್ಷವರ್ಧನ್ ಅವರು, ಲಸಿಕೆಯ ಉತ್ಪಾದನಾ ಸಾಮರ್ಥ್ಯದ ಮಿತಿಗಳು ಇರುವವರೆಗೂ ವಯಸ್ಸಿನ ಮಿತಿಯನ್ನು ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.
ಇಂದು ನಡೆಯುವ ಸಭೆ ಬಳಿಕ ಕರ್ನಾಟಕ ಪ್ರಮುಖವಾಗಿ ಬೆಂಗಳೂರಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.