2ನೇ ದಿನಕ್ಕೆ ಕಾಲಿಟ್ಟ ಬಸ್ ನೌಕರರ ಮುಷ್ಕರ: ಪ್ರಯಾಣಿಕರ ಪರದಾಟ, ಖಾಸಗಿ ಬಸ್-ಆಟೋಗಳ ಆಟಾಟೋಪ!

ವೇತನ ಹೆಚ್ಚಳಕ್ಕೆ ಒತ್ತಾಯಿಸಿ, ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಯಾಣಿಕರ ಪರದಾಟ ಮುಂದುವರಿದಿದೆ.

Published: 08th April 2021 10:33 AM  |   Last Updated: 08th April 2021 01:22 PM   |  A+A-


Bus strike enters second day in Karnataka

ಕಲಬುರಗಿಯಲ್ಲಿ ಇಂದು ಬೆಳಗ್ಗೆ ಕಂಡುಬಂದ ದೃಶ್ಯ

Posted By : Sumana Upadhyaya
Source : ANI

ಬೆಂಗಳೂರು: ವೇತನ ಹೆಚ್ಚಳಕ್ಕೆ ಒತ್ತಾಯಿಸಿ, ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಯಾಣಿಕರ ಪರದಾಟ ಮುಂದುವರಿದಿದೆ.

ತಮ್ಮ ದಿನನಿತ್ಯದ ಕೆಲಸಗಳಿಗೆ, ಊರುಗಳಿಗೆ ಅನಿವಾರ್ಯವಾಗಿ ಹೋಗಬೇಕೆಂದವರು ಬಸ್ ನಿಲ್ದಾಣಕ್ಕೆ ಬಂದು ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆಯಿದೆ. ಪರಿಸ್ಥಿತಿಯ ಲಾಭ ಪಡೆದುಕೊಂಡು ಹಲವು ಕಡೆಗಳಲ್ಲಿ ಖಾಸಗಿ ಬಸ್ ಮಾಲೀಕರು, ಆಟೋ, ಟ್ಯಾಕ್ಸಿ ಚಾಲಕರು ಜನಸಾಮಾನ್ಯರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಅನೇಕ ದೂರುಗಳು ಕೇಳಿಬಂದಿವೆ.

ಬೆಂಗಳೂರಿನಲ್ಲಿ ಪ್ರಯಾಣಿಕರು ಹೇಳಿದಲ್ಲಿಗೆ ಆಟೋದವರು ಬರುವುದಿಲ್ಲ, ಬಂದರೂ ದುಪ್ಪಟ್ಟು ಹಣ ಕೇಳುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ. ಸರ್ಕಾರಿ ಬಸ್ಸುಗಳನ್ನೇ ನಂಬಿಕೊಂಡು ಇರುವ ಲಕ್ಷಾಂತರ ಮಂದಿಗೆ ಸಾರಿಗೆ ಸೌಲಭ್ಯವಿಲ್ಲದೆ ತೊಂದರೆಯಾಗಿದೆ. ಒಟ್ಟಿನಲ್ಲಿ ಸರ್ಕಾರ ಮತ್ತು ಸಾರಿಗೆ ಇಲಾಖೆ ನೌಕರರ ಕಿತ್ತಾಟದಲ್ಲಿ ಜನಸಾಮಾನ್ಯರು ನಲುಗಿ ಹೋಗುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ಕೆಲವೆಡೆ ಸರ್ಕಾರಿ ಸಾರಿಗೆ ಬಸ್ ಚಾಲನೆ: ಬೆಂಗಳೂರಿನ ಶಿವಾಜಿನಗರ ಬಸ್ ನಿಲ್ದಾಣದಿಂದ ಇಂದು ಬೆಳಗ್ಗೆ ಪೊಲೀಸ್ ಭದ್ರತೆ ಮಧ್ಯೆ 4 ಬಿಎಂಟಿಸಿ ಬಸ್ಸುಗಳು ಸಂಚಾರ ಆರಂಭಿಸಿವೆ. ತರಬೇತಿ ನಿರತ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ತರಬೇತಿ ನಿರತ ಚಾಲಕ, ನಿರ್ವಾಹಕ, ಮೆಕ್ಯಾನಿಕ್ ಗಳಿಗೆ ಇಂದು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದ್ದು ಗೈರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಕೆಲವೆಡೆ ತರಬೇತಿ ನಿರತ ನೌಕರರು ಬಸ್ ಓಡಿಸುತ್ತಿದ್ದಾರೆ.

ಇಂದು ಮಧ್ಯಾಹ್ನ ಸಭೆ: ಸಾರಿಗೆ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ಜಯನಗರ ಆರ್ ಟಿಒ ಕಚೇರಿಯಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಸಭೆ ನಡೆಯಲಿದ್ದು ಖಾಸಗಿ ಬಸ್ ಚಾಲಕರ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಲ್ಲಿ ಖಾಸಗಿ ಬಸ್ಸುಗಳಲ್ಲಿ ಸಂಚರಿಸುವ ಮಕ್ಕಳು, ವಯಸ್ಕರು, ಇಳಿ ವಯಸ್ಸಿನವರಿಗೆ ಸೂಕ್ತ ದರ ನಿಗದಿಯಾಗಲಿದೆ.

ಪರೀಕ್ಷೆ ಮುಂದೂಡಿಕೆ: ಸಾರಿಗೆ ನೌಕರರ ಮುಷ್ಕರ ಮುಂದುವರಿದ ಹಿನ್ನೆಲೆ, ಮಂಗಳೂರು ವಿಶ್ವವಿದ್ಯಾಲಯ ಇಂದಿನಿಂದ ಇದೇ 10ರವರೆಗೆ ನಿಗದಿಪಡಿಸಿದ್ದ ಎಲ್ಲ ಪದವಿ ಪರೀಕ್ಷೆಗಳನ್ನು ಮುಂದೂಡಿದೆ. ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ನಿಗದಿಪಡಿಸಿ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ.

ಇಲಾಖೆಗೆ ಭಾರೀ ನಷ್ಟ: ಸಾರಿಗೆ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ ನಡೆಸುತ್ತಿರುವ  ಮುಷ್ಕರದಿಂದಾಗಿ ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ ನಿನ್ನೆ ಒಂದೇ ದಿನ ಸುಮಾರು 14 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಬಿಎಂಟಿಸಿ ಪ್ರಸ್ತುತ ದಿನದ ಆದಾಯ ಸುಮಾರು ಎರಡೂವರೆಯಿಂದ 3 ಕೋಟಿ ರೂಪಾಯಿ, ಕೆಎಸ್‌ಆರ್‌ಟಿಸಿಯ ನಿತ್ಯದ ಆದಾಯ 7 ಕೋಟಿ ರೂಪಾಯಿ, ವಾಯವ್ಯ ಸಾರಿಗೆಯ ಆದಾಯ 2 ಕೋಟಿ ಮತ್ತು ಈಶಾನ್ಯ ಸಾರಿಗೆಯ ಆದಾಯ 2 ಕೋಟಿ ರೂಪಾಯಿಯಾಗಿದೆ.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp