
ಸಂಗ್ರಹ ಚಿತ್ರ
ಬೆಂಗಳೂರು: ವಿಶ್ವವಿದ್ಯಾಲಯಗಳ ಆವರಣದಲ್ಲಿ ಮರಗಳ ಕಡಿಯುವುದಕ್ಕೆ ಹೈಕೋರ್ಟ್ ಬುಧವಾರ ತಡೆ ನೀಡಿದೆ.
ಬೆಂಗಳೂರು ವಿವಿ ಜ್ಞಾನಭಾರತಿ ಆವರಣದ ಜೈವಿಕ ವನದ ವ್ಯಾಪ್ತಿಯ 25 ಎಕರೆ ಜಾಗದಲ್ಲಿ ಕಲಬುರಗಿ ಕೇಂದ್ರಿಯ ವಿವಿಯ ಪ್ರಾದೇಶಿಕ ಕೇಂದ್ರ ಸ್ಥಾಪನೆ ಹಾಗೂ ಯೋಗ ಕೇಂದ್ರ ನಿರ್ಮಾಣಕ್ಕಾಗಿ ನೆಲ ಸಮತಟ್ಟು ಮಾಡುವ ಮತ್ತು ಮರಗಳ ತೆರವು ಕಾರ್ಯ ಮುಂದುವರಿಸದಂತೆ ಕಲಬುರಗಿಯ ಕೇಂದ್ರೀಯ ವಿವಿ ಕುಲಪತಿ ಹಾಗೂ ಅಂತರ್ ವಿವಿ ಯೋಗ ವಿಜ್ಞಾನ ಕೇಂದ್ರದ ನಿರ್ದೇಶಕರಿಗೆ ಹೈಕೋರ್ಟ ನಿರ್ದೇಶನ ನೀಡಿದೆ.
ಈ ಕುರಿತು ವಕೀಲ ಕೆ.ಬಿ.ವಿಜಯ ಕುಮಾರ್ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆ ಜೂ.1ಕ್ಕೆ ಮುಂದೂಡಿತು.
ವಿಚಾರಣೆ ವೇಲೆ ಅರ್ಜಿದಾರರೂ ಆದ ವಕೀಲ ಕೆಬಿ. ವಿಜಯಕುಮಾರ್, ಜೈವಿಕ ವನದ ವ್ಯಾಪ್ತಿಯಲ್ಲಿ ಕೇಂದ್ರೀಯ ವಿವಿ ಹಾಗೂ ಅಂತರ್ ವಿವಿ ಯೋಗ ವಿಜ್ಞಾನ ಕೇಂದ್ರಕ್ಕೆ 25 ಎಕರೆ ಜಾಗ ಮಂಜೂರಾಗಿದೆ. ಆ ಜಾಗದಲ್ಲಿ ಈಗಾಗಲೇ ನೆಲ ಸಮತಟ್ಟುಗೊಳಿಸುವ ಮತ್ತು ಮರಗಳನ್ನು ತೆರವುಗೊಳಿಸುವ ಕೆಲಸ ಮುಂದುವರೆದಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಬೆಂಗಳೂರು ವಿವಿಗೆ ಸೇರಿದ ಪಂತರಪಾಳ್ಯದ ವಿವಿಧ ಸರ್ವೆ ನಂಬರ್'ಗಳ 127 ಎಕರೆ ಜಾಗದಲ್ಲಿ ಜೈವಿಕ ವನ ಇದೆ. ಅದರಲ್ಲಿ ನೂರಾರು ವಿವಿಧ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳು, 500ಕ್ಕೂ ಹೆಚ್ಚು ಔಷಧೀಯ ಸಸ್ಯ ಪ್ರಬೇಧಗಳಿವ. ಈ ಜೈವಿಕ ವನದ ವ್ಯಾಪ್ತಿಯಲ್ಲಿ ಕಲಬುರಗಿಯ ಕೇಂದ್ರೀಯ ವಿವಿ ಕರ್ನಾಟಕ ಇದರ ಪ್ರಾದೇಶಿಕ ಕೇಂದ್ರ ಸ್ಥಾಪಿಸಲು 10 ಎಕರೆ ಹಾಗೂ ನ್ಯಾಕ್ ಅಧೀನದಲ್ಲಿ ಬರುವ ಅಂತರ್ ವಿವಿ ಯೋಗ ವಿಜ್ಞಾನ ಕೇಂದ್ರಕ್ಕೆ 15 ಎಕರೆ ಜಾಗವನ್ನು ಬಿಟ್ಟುಕೊಡುವ ಕುರಿತು 2020ರ ಮಾರ್ಚ್ ಮತ್ತು ಆಗಸ್ಟ್ ನಲ್ಲಿ ಆದೇಶಿಸಲಾಗಿದೆ. ಈ ಆದೇಶವನ್ನು ಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ.