ಬೆಂಗಳೂರಲ್ಲೊಂದು ಆಘಾತಕಾರಿ ಕ್ರೈಮ್: ಜಗಳವಾಡುವಾಗ ತಂದೆಯ ಪರ ವಹಿಸಿದ್ದ 3 ವರ್ಷದ ಮಗಳನ್ನೇ ಕೊಂದ ತಾಯಿ!
ತನಗಿಂತ ಪತಿಯ ಮೇಲೆ ಮೂರು ವರ್ಷದ ಮಗಳು ಹೆಚ್ಚು ಆದ್ಯತೆ ನೀಡುತ್ತಾಳೆ ಎಂದು ನೊಂದ ತಾಯಿ ಮಗುವನ್ನು ಹತ್ಯೆಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Published: 08th April 2021 12:04 PM | Last Updated: 08th April 2021 01:15 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ತನಗಿಂತ ಪತಿಯ ಮೇಲೆ ಮೂರು ವರ್ಷದ ಮಗಳು ಹೆಚ್ಚು ಆದ್ಯತೆ ನೀಡುತ್ತಾಳೆ ಎಂದು ನೊಂದ ತಾಯಿ ಮಗುವನ್ನು ಹತ್ಯೆಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂರು ವರ್ಷದ ಮಗಳು ವಿನುತಾ ತನ್ನ ತಂದೆ ಈರಣ್ಣಗೆ ಹೆಚ್ಚು ಬೆಲೆ ಕೊಡುವುದಲ್ಲದೆ ತನ್ನನ್ನು ಎಲ್ಲರ ಮುಂದೆ ಅವಮಾನ ಮಾಡುತ್ತಾಳೆ ಎಂದು ನೊಂದು ಸುಧಾ ಮಗಳನ್ನು ಕೊಂದಿರುವುದಾಗಿ ತನಿಖೆ ವೇಳೆ ತಿಳಿದುಬಂದಿದೆ. ಈ ಕುಟುಂಬ ಜ್ಞಾನಭಾರತಿ ಸಮೀಪ ಮಲ್ಲತಹಳ್ಳಿಯಲ್ಲಿ ನೆಲೆಸಿದೆ.
ಆಗಿದ್ದ ಘಟನೆಯೇನು?: ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕೆಲಸ ಮಾಡುವ ಈರಣ್ಣ ಮನೆಗೆ ಬರುವುದು ಬೆಳಗಿನ ತಿಂಡಿ ಮತ್ತು ಮಧ್ಯಾಹ್ನ ಊಟಕ್ಕೆ ಮಾತ್ರ. ಮೊನ್ನೆ ಮಂಗಳವಾರ ಮಧ್ಯಾಹ್ನ ಊಟದ ಸಮಯದಲ್ಲಿ ಮಗು ವಿನುತಾ ಟಿವಿ ನೋಡುತ್ತಿದ್ದಳು. ಆಗ ಈರಣ್ಣ ಬಂದು ತನಗೆ ಟಿವಿ ನೋಡಬೇಕು ರಿಮೋಟ್ ಕೊಡು ಎಂದು ಕೇಳಿದ್ದಾನೆ. ನೀವು ನ್ಯೂಸ್ ಮಾತ್ರ ನೋಡ್ತೀರ, ನ್ಯೂಸ್ ನೋಡೋದಾದ್ರೆ ಮನೆಗೆ ಬರಲೇಬೇಡಿ ಎಂದು ಸುಧಾ ಬೈದಿದ್ದಾಳೆ. ವಿನುತಾ ತಂದೆಗೆ ಪ್ರೋತ್ಸಾಹ ನೀಡಿ ನೀನು ಮೆಂಟಲ್ ತರ ಯಾಕೆ ಆಡ್ತಿ ಯಾಕಮ್ಮ, ತಂದೆ ಟಿವಿ ನೋಡಲಿ ಬಿಡು ಎಂದು ಹೇಳಿದ್ದಾಳೆ. ಇದರಿಂದ ಸುಧಾ ಸಿಟ್ಟಾಗಿದ್ದಳು.
ರಾತ್ರಿ 8 ಗಂಟೆ ಸುಮಾರಿಗೆ ಈರಣ್ಣ ಮನೆಗೆ ಬಂದಾಗ ಮನೆ ಬೀಗ ಹಾಕಿತ್ತು. ಪತ್ನಿ ಸುಧಾಳನ್ನು ಮೊಬೈಲ್ ನಲ್ಲಿ ಸಂಪರ್ಕಿಸಿದಾಗ ವಿನುತಾಳನ್ನು ಕರೆದುಕೊಂಡು ಗೋಬಿ ಮಂಚೂರಿ ತಿನ್ನಲು ಬಂದಿದ್ದೇನೆ ಎಂದಿದ್ದಾಳೆ. ನಂತರ ಆಕೆ ಹಣ ನೀಡುವಾಗ ಮಗು ಕಾಣೆಯಾಗಿದೆ ಎಂದು ಪತಿಗೆ ಫೋನ್ ಮಾಡಿದಳು, ಗಾಬರಿಗೊಂಡ ಈರಣ್ಣ ಸ್ನೇಹಿತನೊಂದಿಗೆ ಗೋಬಿ ಮಂಚೂರಿ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಮಗಳನ್ನು ಹುಡುಕಲು ಪ್ರಾರಂಭಿಸಿದ. ಆ ಹೊತ್ತಿಗೆ ಸುಧಾ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಳು. ಮತ್ತೆ ಒಂದು ಗಂಟೆ ಬಿಟ್ಟು ಮೊಬೈಲ್ ಆನ್ ಆದಾಗ ಗಂಡ-ಹೆಂಡತಿ ಇಬ್ಬರೂ ಸೇರಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ಹೋಗಿ ದೂರನ್ನು ನೀಡಿದರು.
ನಿನ್ನೆ ಬೆಳಗ್ಗೆ ನಿರ್ಮಾಣ ಕಟ್ಟಡದ ಸೈಟ್ ಬಳಿ ದೀಪಾ ಕಾಂಪ್ಲೆಕ್ಸ್ ಹತ್ತಿರ ಬಾಲಕಿಯ ಶವವೊಂದು ಸಿಕ್ಕಿತು. ಬಾಲಕಿಯ ಪೋಷಕರನ್ನು ಕರೆದು ಪೊಲೀಸರು ತೋರಿಸಿದಾಗ ಅದು ವಿನುತಾಳದ್ದಾಗಿತ್ತು. ಗೋಬಿ ಮಂಚೂರಿ ತೆಗೆದುಕೊಂಡ ನಂತರ ತನ್ನ ಮಗಳು ಕಾಣೆಯಾಗಿದ್ದಳು ಎಂದು ಸುಧಾ ಹೇಳುತ್ತಾಳೆ.
ಆದರೆ ಸಂಶಯ ಬಂದ ಪೊಲೀಸರು ತನಿಖೆ ಮಾಡಿದಾಗ ಸುಧಾ ಹೇಳಿದಂತೆ ಗೋಬಿ ಮಂಚೂರಿ ತೆಗೆದುಕೊಳ್ಳುವ ಸ್ಥಳಕ್ಕೆ ತಾಯಿ-ಮಗಳು ಹೋಗಿರಲೇ ಇಲ್ಲ. ಸುಧಾಳನ್ನು ಪೊಲೀಸರು ತೀವ್ರ ತನಿಖೆ ನಡೆಸಿದಾಗ ಆಕೆ ಮಗಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಳು.
ತನ್ನನ್ನು ಎಲ್ಲರ ಮುಂದೆ ಅವಮಾನ ಮಾಡುತ್ತಾಳೆ, ತಂದೆಯ ಪರ ವಹಿಸಿ ಮಗಳು ಮಾತನಾಡುತ್ತಾಳೆ, ತನ್ನ ಮಾತುಗಳನ್ನು ಕೇಳುವುದೇ ಇಲ್ಲ ಎಂದು ಸಿಟ್ಟಿನಿಂದ ಸುಧಾ ದುಪ್ಪಟ್ಟಾದಿಂದ ಮಗುವಿನ ಕುತ್ತಿಗೆ ಮತ್ತು ಮೂಗಿನ ಉಸಿರುಗಟ್ಟಿಸಿ ಸಾಯಿಸಿದ್ದಾಳೆ ಎಂದು ತಿಳಿಯಿತು.