ಸಾರಿಗೆ ನೌಕರರ ಮುಷ್ಕರ: ಒಪ್ಪಂದದ ಆಧಾರದ ಮೇಲೆ ನಿವೃತ್ತ ಚಾಲಕ, ನಿರ್ವಾಹಕರ ನಿಯೋಜನೆ!

ಸಾರಿಗೆ ನೌಕರರ ಮುಷ್ಕರಿಂದ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯುಂಟಾಗದಿರಲು ಹೊಸಹೊಸ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುತ್ತಿರುವ ಸಾರಿಗೆ ಇಲಾಖೆ, ಇದೀಗ ಸೇವೆಗೆ ನಿವೃತ್ತ ಚಾಲಕ ಹಾಗೂ ನಿರ್ವಾಹಕರನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನಿಯೋಜಿಸುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರಿಂದ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯುಂಟಾಗದಿರಲು ಹೊಸಹೊಸ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುತ್ತಿರುವ ಸಾರಿಗೆ ಇಲಾಖೆ, ಇದೀಗ ಸೇವೆಗೆ ನಿವೃತ್ತ ಚಾಲಕ ಹಾಗೂ ನಿರ್ವಾಹಕರನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನಿಯೋಜಿಸುತ್ತಿದೆ.

ಈ ಸಂಬಂಧ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಅಧಿಸೂಚನೆ ಹೊರಡಿಸಿದ್ದು, ನಿವೃತ್ತ ಚಾಲಕ ಹಾಗೂ ನಿರ್ವಾಹಕರನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನಿಯೋಜಿಸಲಾಗುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ಕಳೆದ ಎರಡು ವರ್ಷಗಳಲ್ಲಿ ನಿವೃತ್ತಿ ಹೊಂದಿದ 62 ವರ್ಷ ವಯೋಮಿತಿ ಮೀರದ ಚಾಲಕ ಹಾಗೂ ನಿರ್ವಾಹಕರನ್ನು ತಾತ್ಕಾಲಿಕವಾಗಿ ನಿಗಮದಲ್ಲಿ ಒಪ್ಪಂದದ ಆಧಾರದ ಮೇಲೆ ನಿಯೋಜಿಸಲು ಉದ್ದೇಶಿಸಲಾಗಿರುತ್ತದೆ. ನಿವೃತ್ತ ನೌಕರರನ್ನು ಅವರು ನಿವೃತ್ತಿ ಹೊಂದಿದ ವಿಭಾಗ ಅಥವಾ ವಾಸಸ್ಥಳಕ್ಕೆ ಹತ್ತಿರದ ವಿಭಾಗಗಳಲ್ಲಿ ನಿಯೋಜಿಸಲಾಗುವುದಾಗಿಯೂ ಹಾಗೂ ಷರತ್ತುಗಳನ್ನು ಒಪ್ಪಿ ಕರ್ತವ್ಯ ನಿರ್ವಹಿಸಲು ಆಸಕ್ತಿ ಇರುವ ನಿವೃತ್ತ ಚಾಲನಾ ಸಿಬ್ಬಂದಿಗಳು ನಿವೃತ್ತಿ ಹೊಂದಿದ ವಿಭಾಗದಲ್ಲಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. 

ಚಾಲಕರು ದೈಹಿಕವಾಗಿ ಚಾಲನಾ ನಿರ್ವಾಹಕ ವೃತ್ತಿ ಮಾಡಲು ಸಮರ್ಥರಿರಬೇಕು. ಈ ಬಗ್ಗೆ ನಿಗಮದಲ್ಲಿ ನಿಗಧಿಪಡಿಸಿರುವ ದೈಹಿಕ ದೃಷ್ಟಿ ಸಾಮರ್ಥ್ಯ ಪ್ರಮಾಣ ಪತ್ರ ಪಡೆದಿರುಬೇಕು. ಕೋವಿಡ್ -19 ನೆಗೆಟಿವ್ ವರದಿ ಕುರಿತು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯುವುದು. ಪ್ರಸ್ತುತ ಚಾಲ್ತಿಯಲ್ಲಿರುವ ಭಾರಿ ವಾಹನ ನಿರ್ವಾಹಕ ಪರವಾನಗಿ ಹೊಂದಿರುವುದು ಕಡ್ಡಾಯವಾಗಿದೆ.

ಪ್ರತಿದಿನದ ಕರ್ತವ್ಯಕ್ಕೆ ಚಾಲಕರಿಗೆ ರೂ.800/- ಹಾಗೂ ನಿರ್ವಾಹಕರಿಗೆ ರೂ.700/- ಗೌರವ ಧನ ಪಾವತಿಸಲಾಗುವುದು. ವಾರದ ರಜೆ ಹೊರತುಪಡಿಸಿ ಬೇರೆ ಯಾವುದೇ ರಜೆ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ. ಒಪ್ಪಂದದ ಅವಧಿಯನ್ನು ಯಾವುದೇ ಹೆಚ್ಚುವರಿ ಆರ್ಥಿಕ ಸೇವಾ ಸೌಲಭ್ಯಗಳಿಗೆ ಪರಿಗಣಿಸುವುದಿಲ್ಲ ಎಂದು ಷರತ್ತುಗಳನ್ನು ಸಾರಿಗೆ ಇಲಾಖೆ ವಿಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com