ಉದ್ಯೋಗಸ್ಠರಿಗೆ ಕಚೇರಿಗಳಲ್ಲೇ ಲಸಿಕೆ ನೀಡಲು ವ್ಯವಸ್ಥೆ: ಸಚಿವ ಸುಧಾಕರ್
ಕೋವಿಡ್ ಸೋಂಕು ನಿಯಂತ್ರಣ ಸಂಬಂಧ 45 ವರ್ಷ ಮೇಲ್ಪಟ್ಟ ಉದ್ಯೋಗಸ್ಥರು ಇರುವ ಸ್ಥಳಕ್ಕೆ ಹೋಗಿ ಲಸಿಕೆ ನೀಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಏ.11ರಿಂದ ರಾಜ್ಯದಲ್ಲಿಯೂ ಇದಕ್ಕೆ ವ್ಯವಸ್ಥೆ ಮಾಡಲಾಗುವುದು.
Published: 08th April 2021 12:15 PM | Last Updated: 08th April 2021 01:25 PM | A+A A-

ಸುಧಾಕರ್
ಬೆಂಗಳೂರು: ಕೋವಿಡ್ ಸೋಂಕು ನಿಯಂತ್ರಣ ಸಂಬಂಧ 45 ವರ್ಷ ಮೇಲ್ಪಟ್ಟ ಉದ್ಯೋಗಸ್ಥರು ಇರುವ ಸ್ಥಳಕ್ಕೆ ಹೋಗಿ ಲಸಿಕೆ ನೀಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಏ.11ರಿಂದ ರಾಜ್ಯದಲ್ಲಿಯೂ ಇದಕ್ಕೆ ವ್ಯವಸ್ಥೆ ಮಾಡಲಾಗುವುದು. ಇದರಿಂದ ಲಸಿಕೆ ವಿತರಣೆ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಕೊರೋನಾ ನಿಯಂತ್ರಣ ಕುರಿತು ಬೀದರ್, ಬೆಳಗಾವಿ, ವಿಜಯಪುರ, ಕಲಬುರಗಿ, ತುಮಕೂರು, ಚಿಕ್ಕಮಗಳೂರು, ದಕ್ಷಿಣ, ಕನ್ನಡ, ಉಡುಪಿ, ಹಾಸನ, ಮಂಡ್ಯ, ಮೈಸೂರು ಮತ್ತು ಚಿತ್ರದುರ್ಗ ಜಿಲ್ಲೆಯ ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಕೇಂದ್ರ ಆರೋಗ್ಯ ಸಚಿವರು ನೀಡಿದ ಸಲಹೆ, ಸೂಚನೆಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸುಧಾಕರ್, ಐಟಿ ಉದ್ಯಮ ಸೇರಿದಂತೆ ಕೆಲ ದೊಡ್ಡ ಉದ್ಯಮಗಳು ಸ್ಥಳಗಳಿಗೆ ಭೇಟಿ ನೀಡಿ ಲಸಿಕೆ ನೀಡುವ ಸಂಬಂಧ ಮನವಿ ಮಾಡಿದ್ದವು. ಇದಕ್ಕೆ ಸ್ಪಂದಿಸಿರುವ ಕೇದ್ರ ಸರ್ಕಾರವು ಕೇಂದ್ರ ಸರ್ಕಾರ, ಖಾಸಗಿ ಸಂಸ್ಥೆಯ ನೌಕರರಿಗೆ ಅವರಿರುವ ಸ್ಥಳಕ್ಕೆ ತೆರಳಿ ಲಸಿಕೆ ಹಾಕಲು ಅನುಮತಿ ನೀಡಿದೆ. ಅಂತೆಯೇ ರಾಜ್ಯ ಸರ್ಕಾರವು ಸಹ ಕ್ರಮ ಕೈಗೊಳ್ಳಲಿದೆ. ಇದರಿಂದ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
ಈ ವರೆಗೆ 50 ಲಕ್ಷ ಡೋಸ್ ತಲುಪಿದೆ. ಆದಷ್ಟು ಬೇಗ ಇನ್ನೂ 50 ಲಕ್ಷ ಅಥವಾ ಒಂದು ಕೋಟಿ ಡೋಸ್ ತಲುಪಲಿವೆ ಎಂದು ಮಾಹಿತಿ ನೀಡಿದರು.