ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಅಧಿಕಾರಿಗಳೇ ಮನವೊಲಿಸಬೇಕು: ಸಚಿವ ಸುರೇಶ್ ಕುಮಾರ್

ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಅಧಿಕಾರಿಗಳೇ ಮನವೊಲಿಸಬೇಕೆಂದು ಸಚಿವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಹೇಳಿದ್ದಾರೆ. 
ಸಭೆಯಲ್ಲಿ ಸಚಿವ ಸುರೇಶ್ ಕುಮಾರ್
ಸಭೆಯಲ್ಲಿ ಸಚಿವ ಸುರೇಶ್ ಕುಮಾರ್

ಬೆಂಗಳೂರು: ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಅಧಿಕಾರಿಗಳೇ ಮನವೊಲಿಸಬೇಕೆಂದು ಸಚಿವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಹೇಳಿದ್ದಾರೆ. 

ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಎಸ್ಸೆಸ್ಸೆಲ್ಸಿ ಪಾಠ ಪ್ರವಚನಗಳ ಪ್ರಗತಿ ಮತ್ತು ಪರೀಕ್ಷಾ ಸಿದ್ಧತೆ ಕುರಿತ ಸಭೆಯಲ್ಲಿ ಮಾತನಾಡಿದ ಅವರುವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಅಧಿಕಾರಿಗಳೇ ಮನವೊಲಿಸಬೇಕೆಂದು ಸೂಚಿಸಿದ್ದಾರೆ. 

ಕೊರೊನಾ ಪರಿಸ್ಥಿತಿಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಎಲ್ಲಾ ಇಲಾಖೆಗಳು , ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಕೆಲವು ಶಾಲೆಗಳಲ್ಲಿ ಪಠ್ಯ ಮುಗಿದು ಪುನರಾವರ್ತನೆ ಹಂತದಲ್ಲಿದ್ದರೆ, ಕೆಲವು ಶಾಲೆಗಳಲ್ಲಿ ಕೆಲವು ವಿಷಯಗಳಲ್ಲಿ ಒಂದೆರೆಡು ಪಠ್ಯಗಳು ಬಾಕಿ ಇವೆ ಎಂಬ ಮಾಹಿತಿ ಇದೆ. ಈ ಬಾರಿ ತರಗತಿ ಹಾಜರಾತಿ ಕಡ್ಡಾಯವಲ್ಲ, ಹೀಗಾಗಿತರಗತಿಗೆ ಹಾಜರಾಗದಿರುವ ಮಕ್ಕಳು ಎಲ್ಲಿದ್ದಾರೆ, ಪರೀಕ್ಷೆಗೆ ಹಾಜರಾಗುವಂತೆ ಮನವೊಲಿಕೆ ಮತ್ತು ಪಠ್ಯಗಳ ಕುರಿತು ಸಲಹೆ ಸೂಚನೆ ನೀಡಲು ಶಾಲಾ ಶಿಕ್ಷಕರು ಮತ್ತು ಮುಖ್ಯೋಪಧ್ಯಾಯರು ಗಮನಹರಿಸಬೇಕು ಎಂದು ಹೇಳಿದರು.

ಪರೀಕ್ಷಾ ಕೊಠಡಿಯಲ್ಲಿ ಈ ಬಾರಿ ಗರಿಷ್ಠ 18 ರಿಂದ 20 ವಿದ್ಯಾರ್ಥಿಗಳಷ್ಟೆ ಇರಬೇಕು. ಪ್ರತಿ ಪರೀಕ್ಷಾ ಕೊಠಡಿಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮಂಡಳಿಯಿಂದಲೇ ಪ್ರತ್ಯೇಕ ಪ್ರಶ್ನೆಪತ್ರಿಕೆ ಬಂಡಲ್‌ ರವಾನಿಸಲು ಪರಿಶೀಲಿಸಲಾಗುತ್ತಿದೆ. ಮಳೆಗಾಲದಲ್ಲಿ ಈ ಬಾರಿ ಪರೀಕ್ಷೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಕಿರಿಕಿರಿ ಆಗದಂತೆ ಎಚ್ಚರವಹಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಛತೆ, ಶೌಚಾಲಯ, ನೀರು, ಮಾಸ್ಕ್, ಸೋಪಿನ ವ್ಯವಸ್ಥೆ ಕುರಿತು ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಪರೀಕ್ಷೆಗೆ ನಿಗದಿಪಡಿಸಿದ್ದ ಪಠ್ಯಕ್ರಮದ ಪಾಠ ಬೋಧನೆ ಮುಗಿದು ಪುನರಾವರ್ತನೆ ಹಂತದಲ್ಲಿರುವ ಈ ಸಮಯದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಪ್ರೇರೇಪಣೆಗೊಳಿಸಬೇಕು. ಪರೀಕ್ಷೆಯ ಫಲಿತಾಂಶ ಸಂಖ್ಯಾತ್ಮಕವಾಗಿರುವುದಕ್ಕಿಂತ ಗುಣಾತ್ಮಕವಾಗಿರುವಂತೆ ಮತ್ತು ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಆದ್ಯತೆ ನೀಡಬೇಕು. ಪರೀಕ್ಷೆಯಲ್ಲಿ ಸಲ್ಲದ ವಿಷಯಗಳಿಗೆ ಆದ್ಯತೆ ನೀಡಿದ್ದು ಕಂಡುಬಂದರೆ, ಸಂಬಂಧಿಸಿದ ಡಿಡಿಪಿಐ ಹಾಗೂ ಬಿಇಒಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 

ತಾಲ್ಲೂಕು ಇಲ್ಲವೇ ಹೋಬಳಿ ಮಟ್ಟದಲ್ಲಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ನಡೆಸಿ ವಿದ್ಯಾರ್ಥಿಗಳ ಅಭ್ಯಾಸದ ಪ್ರಗತಿ, ಪರೀಕ್ಷೆಗೆ ಪ್ರೇರೇಪಣೆಗೊಳಿಸಲು ಕ್ರಮ ಕೈಗೊಳ್ಳುವ ಕುರಿತು ಮಾಹಿತಿ ನೀಡಬೇಕು. ಪರೀಕ್ಷೆಗೆ ನೋಂದಣಿ ಮಾಡಿಸಿಯೂ ತರಗತಿಗೆ ಹಾಜರಾಗದಿರುವ ವಿದ್ಯಾರ್ಥಿಗಳ ಕುರಿತು ಮಾಹಿತಿ ಸಂಗ್ರಹಿಸಿ, ಪರೀಕ್ಷೆಗೆ ಹಾಜರಾಗುವಂತೆ ಗಮನಹರಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಯಾವುದೇ ವಿಷಯದ ಶಿಕ್ಷಕರ ಕೊರತೆಯಿದ್ದರೆ ಅಕ್ಕಪಕ್ಕದ ಶಾಲೆಗಳ ಶಿಕ್ಷಕರನ್ನು ಆ ಶಾಲೆಗಳಿಗೆ ನಿಯೋಜಿಸುವ ಮೂಲಕ ಪಠ್ಯಕ್ರಮ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. 

ತರಗತಿಯಿಂದ ದೂರ ಇರುವ ಮಕ್ಕಳು ಯಾವ ಕಾರಣದಿಂದ ದೂರವಿದ್ದಾರೆ ಎಂಬ ಕುರಿತು ಕರೆ ಮಾಡಿ ಸಂಪರ್ಕಿಸಿ ಪರೀಕ್ಷೆ ಸಿದ್ಧತೆ ಕುರಿತು ಕೌನ್ಸೆಲಿಂಗ್ ಮಾಡಬೇಕು. ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಹಿಂದುಳಿಯುತ್ತಿದ್ದಾರೆ ಎಂಬುದನ್ನು ಈಗಿನಿಂದಲೇ ಅವರತ್ತ ವಿಶೇಷ ಗಮನ ಹರಿಸಿ ಉತ್ತಮ ಅಂಕಗಳನ್ನು ಪಡೆಯುವಂತೆ ಮಾಡಬೇಕು ಎಂದು ಸೂಚಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com