ವಿದ್ಯಾರ್ಥಿಗಳಿಗೆ ಸಹಾಯವಾಗಲು ಸರ್ಕಾರದಿಂದ ಸೇತುಬಂಧ ಯೋಜನೆ
ವಿದ್ಯಾರ್ಥಿಗಳಿಗೆ ಸಹಾಯಕವಾಗಲು ಹಿಂದಿನ ತರಗತಿಯ ಪಾಠ ಕಲಿಸಿ ಮುಂದಿನ ತರಗತಿಯ ಪಾಠ ಕಲಿಸುವ ಸೇತುಬಂಧ ಯೋಜನೆಯನ್ನು ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
Published: 10th April 2021 09:03 AM | Last Updated: 10th April 2021 03:14 PM | A+A A-

ಸಂಗ್ರಹ ಚಿತ್ರ
ಚಿತ್ರದುರ್ಗ: ವಿದ್ಯಾರ್ಥಿಗಳಿಗೆ ಸಹಾಯಕವಾಗಲು ಹಿಂದಿನ ತರಗತಿಯ ಪಾಠ ಕಲಿಸಿ ಮುಂದಿನ ತರಗತಿಯ ಪಾಠ ಕಲಿಸುವ ಸೇತುಬಂಧ ಯೋಜನೆಯನ್ನು ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕಲಿಕೆಯ ಅಂತರವನ್ನು ತುಂಬಲು ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಸೇತುಬಂಧ ಯೋಜನೆಯನ್ನು ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ವಿದ್ಯಾರ್ಥಿಗಳಿಗೆ ಸಹಾಯಕವಾಗಲು ಮಕ್ಕಳಿಗೆ ಹಿಂದಿನ ವರ್ಷದ ಪಠ್ಯಕ್ರಮವನ್ನು ಸಮಗ್ರ ರೀತಿಯಲ್ಲಿ ಕಲಿಸಲಾಗುವುದು ಎಂದು ಹೇಳಿದ್ದಾರೆ.
ಮಳೆಗಾಲ ಹತ್ತಿರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿಇಒಗಳು ಮತ್ತು ಡಿಡಿಪಿಐಗಳು ತಮ್ಮ ಪ್ರದೇಶಗಳಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಕಟ್ಟಡಗಳನ್ನು ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಕಟ್ಟಡಗಳ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಈ ಬಾರಿ ಎಸ್ಎಸ್ಎಲ್'ಸಿ ಪರೀಕ್ಷೆಗೆ 8,75,798 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ, ಕಳೆದ ವರ್ಶ 8,48,203 ವಿದ್ಯಾರ್ಥಿಗಳು ಪರೀಕ್ಷೆಗೆ ನೋದಣಿಯಾಗಿದ್ದರು. ಕಳೆದ ವರ್ಷಕ್ಕಿಂತ ಈ ಬಾರಿ 28 ಸಾವಿರಕ್ಕೂ ಹಚ್ಚು ವಿದ್ಯಾರ್ಥಿಗಳು ಎಸ್ಎಸ್ಎಲ್'ಸಿ ಪರೀಕ್ಷೆಗೆ ನೋಂದಣಿಯಾಗಿದ್ದಾರೆಂದು ತಿಳಿಸಿದ್ದಾರೆ.
ಕಳೆದ ವರ್ಶಷ 6,75,277 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದರು. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗೆ 7,01,651 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ 26,374ಕ್ಕೂ ಹೆಚ್ಚು ಮಕ್ಕಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆಂದಿದ್ದಾರೆ.
ಎಸ್ಎಸ್ಎಲ್'ಸಿ ಪರೀಕ್ಷೆಗಾಗಿ ರಾಜ್ಯದಲ್ಲಿ 3020 ಪರೀಕ್ಷಾ ಕೇಂದ್ರಗಳನ್ನು ಗುರ್ತಿಸಲಾಗಿದೆ. ಚಿತ್ರದುರ್ಗ, ದಾವಣಗೆರೆ, ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆ ಸೇರಿದಂತೆ ಒಟ್ಟು ನಾಲ್ಕು ಜಿಲ್ಲಗಳಿಂದ 309 ಪರೀಕ್ಷಾ ಕೇಂದ್ರಗಳಿದ್ದು 79,862 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆಂದು ಹೇಳಿದ್ದಾರೆ.
ಪರೀಕ್ಷೆಯನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳು ಕೈಜೋಡಿಸುತ್ತಿವೆ. ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಮತ್ತು ಭಾರತೀಯ ರೆಡ್‌ಕ್ರಾಸ್ ಸ್ವಯಂಸೇವಕರು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿ ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲಿದ್ದಾರೆಂದು ತಿಳಿಸಿದ್ದಾರೆ.