ಸೋಂಕಿತ ವ್ಯಕ್ತಿ ದಾಖಲಿಸಿಕೊಳ್ಳಲು ಆಸ್ಪತ್ರೆಗಳ ಹಿಂದೇಟು: ಹಾಸಿಗೆ ಲಭ್ಯವಿಲ್ಲದೆ 33 ವರ್ಷದ ವ್ಯಕ್ತಿ ಸಾವು

33 ವರ್ಷದ ಕೊರೋನಾ ಸೋಂಕು ಪೀಡಿತ ವ್ಯಕ್ತಿಯೊಬ್ಬರು, ಆಸ್ಪತ್ರೆಗಳಲ್ಲಿ ಹಾಸಿಗೆಗಾಗಿ ಅಲೆದು, ಕೊನೆಗೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 33 ವರ್ಷದ ಕೊರೋನಾ ಸೋಂಕು ಪೀಡಿತ ವ್ಯಕ್ತಿಯೊಬ್ಬರು, ಆಸ್ಪತ್ರೆಗಳಲ್ಲಿ ಹಾಸಿಗೆಗಾಗಿ ಅಲೆದು, ಕೊನೆಗೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಘಟನೆ ಶನಿವಾರ ನಡದಿದೆ. 

ಶಿವಾಜಿನಗರದ ನಿವಾಸಿ ಆಗಿರುವ ಅವರು, ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಮಡಿವಾಳದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಅವರಿಗೆ ಶುಕ್ರವಾರ (ಏ.9) ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದರಿಂದಾಗಿ ಆಸ್ಪತ್ರೆಯ ವೈದ್ಯರು ಕೋವಿಡ್ ಚಿಕಿತ್ಸೆ ಸಂಬಂಧ ಬೇರೆ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದರು. ಸೋಂಕಿತ ವ್ಯಕ್ತಿಯನ್ನು ಕುಟುಂಬದ ಸದಸ್ಯರು ಎರಡು ಆಸ್ಪತ್ರೆಗಳಿಗೆ ಕರೆದೊಯ್ದರೂ ದಾಖಲಿಸಿಕೊಳ್ಳಲಿಲ್ಲ. ಪರಿಣಾಮ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. 

ಸರ್ಕಾರಿ ಸಹಾಯವಾಣಿಗೆ ಸಂಪರ್ಕಿಸಿದಾಗ ವಸಂತನಗರದ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸುವುದಾಗಿ ಸಿಬ್ಬಂದಿ ತಿಳಿಸಿದರು. ಆದರೆ, ಅಲ್ಲಿ ಹೆಚ್ಚಿನ ಚಿಕಿತ್ಸೆಗೆ ಹಾಸಿಗೆ ಇಲ್ಲ ಎಂಬ ಕಾರಣ ನೀಡಿ, ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದರು. ಬಳಿಕ ಗಿರಿನಗರದ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸಿರುವುದಾಗಿ ಸಿಬ್ಬಂದಿ ಹೇಳಿದರು. ಆದರೆ, ಅಲ್ಲಿ ಕೂಡ ಹಾಸಿಗೆ ಇಲ್ಲ ಎಂಬ ಕಾರಣ ನೀಡಿ, ದಾಖಲಿಸಿಕೊಂಡಿಲ್ಲ’ ಎಂದು ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಹೇಳಿದ್ದಾರೆ. 

ಗಿರಿನಗರಕ್ಕೆ ಹೋದಾಗಲೇ ರಾತ್ರಿ 10 ಗಂಟೆಯಾಗಿತ್ತು. ಆ ವೇಳೆ ವ್ಯಕ್ತಿಯ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ 25ಕ್ಕೆ ಇಳಿಕೆಯಾಗಿತ್ತು. ಬಳಿಕ ಕೋರಮಂಗಲದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಿಸದೆಯೇ ಶನಿವಾರ ಬೆಳಿಗ್ಗೆ 4 ಗಂಟೆಗೆ ಮೃತಪಟ್ಟರು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದಲ್ಲಿ ಅವರನ್ನು ನಾವು ಕಳೆದುಕೊಳ್ಳುತ್ತಿರಲಿಲ್ಲ’ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. 

ಘಟನೆ ಕುರಿತು ಶಿಕ್ಷಣ ತಜ್ಞ ಮತ್ತು ತುರ್ತು ಪ್ರತಿಕ್ರಿಯೆ ತಂಡದ ಸದಸ್ಯ ಅಮೀನ್-ಎ-ಮುದಾಸರ್ ಅವರು, ಬೆಳಿಗ್ಗೆ ಸುಮಾರು 4 ಗಂಟೆ ಸುಮಾರಿಗೆ ದೂರವಾಣಿ ಕರೆಯೊಂದು ಬಂದಿತ್ತು. ಫೋನ್ ನಲ್ಲಿ ಮಾತನಾಡಿದ ವ್ಯಕ್ತಿ ತಮ್ಮ ತಾಯಿಗೆ ಚಿಕಿತ್ಸೆ ಕೊಡಿಸಲು ಹಾಸಿಗೆ ಬೇಕಿದೆ ಎಂದು ಹೇಳಿದ್ದರು. ಎದೆಗೆ ಸಂಬಂಧಿಸಿದ ಸಮಸ್ಯೆ ಹಿನ್ನೆಲೆಯಲ್ಲಿ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ತಾಯಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 10.30ರ ಸುಮಾರಿಗೆ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ತಿಳಿದುಬಂದಿತ್ತು. ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸುತ್ತಿದ್ದಾರಂದು ಹೇಳಿದ್ದರು. ಬಳಿಕ 6 ಗಂಟೆಗಳಾದರೂ ಹಾಸಿಗೆಗಳು ಸಿಗಲಿಲ್ಲ. ಇಂತಹ ಘಟನೆಗಳು ಸಂಭವಿಸುತ್ತಿರುವುದು ನಿಜಕ್ಕೂ ದುರಾದೃಷ್ಟಕರ ವಿಚಾರ. ಜನರು ಈಗಲಾದರೂ ಕೊರೋನಾವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದ್ದಾರೆ. 

ಆಸ್ಪತ್ರೆಗೆ ನೋಟಿಸ್
ಈ ನಡುವೆ ಘಟನೆ ಸಂಬಂಧ ವಸಂತನಗರ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. 

25 ಗಂಟೆಗಳ ಒಳಗೆ ವಿವರಣೆ ನೀಡದಿದ್ದರೆ 2005ರ ವಿಕೋಪ ನಿರ್ವಹಣೆ ಕಾಯ್ದೆ ಮತ್ತು 2007ರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

ಕೋವಿಡ್ ರೋಗಿಗಳಿಗೆ ಶೇ 50ರಷ್ಟು ಹಾಸಿಗೆ ಮೀಸಲು ಇಡಬೇಕು ಎಂದು ಸರ್ಕಾರ ಆದೇಶ ನೀಡಿದ್ದರೂ ಅದನ್ನು ಪಾಲಿಸಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಗದೆ ವ್ಯಕ್ತಿ ಸಾವಿಗೀಡಾಗಿದ್ದಾರೆ. ಇದಕ್ಕೆ ವಿವರಣೆ ನೀಡಿ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com