5ನೇ ದಿನಕ್ಕೆ ಕಾಲಿಟ್ಟ ಬಸ್ ನೌಕರರ ಮುಷ್ಕರ: ಮುಂದುವರಿದ ಪ್ರಯಾಣಿಕರ ಪರದಾಟ, ಕೆಲವೆಡೆ ಬೆರಳೆಣಿಕೆ ಸರ್ಕಾರಿ ಬಸ್ ಸಂಚಾರ 

ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಭಾನುವಾರ 5ನೇ ದಿನಕ್ಕೆ ಕಾಲಿಟ್ಟಿದೆ.
ಬಸ್ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬಸ್ ನಿಲ್ದಾಣವೊಂದರಲ್ಲಿ ಕಂಡುಬಂದ ದೃಶ್ಯ
ಬಸ್ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬಸ್ ನಿಲ್ದಾಣವೊಂದರಲ್ಲಿ ಕಂಡುಬಂದ ದೃಶ್ಯ

ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಭಾನುವಾರ 5ನೇ ದಿನಕ್ಕೆ ಕಾಲಿಟ್ಟಿದೆ.

ಕೆಲವು ಕಡೆಗಳಲ್ಲಿ ಬೆರಳೆಣಿಕೆಯ ಸಾರಿಗೆ ನಿಗಮದ ಬಸ್ ಸಂಚಾರ ಬಿಟ್ಟರೆ ಮತ್ತೆಲ್ಲೂ ಇಂದು ಸರ್ಕಾರಿ ಬಸ್ಸುಗಳು ಓಡಾಡುತ್ತಿಲ್ಲ. ಖಾಸಗಿ ಬಸ್ಸುಗಳನ್ನೇ ಪ್ರಯಾಣಿಕರು ನೆಚ್ಚಿಕೊಳ್ಳಬೇಕಾಗಿ ಬಂದಿದೆ. ಯಾವಾಗಲೂ ಜನರಿಂದ ವ್ಯಾಪಾರ, ವಹಿವಾಟುಗಳಿಂದ ಗಿಜಿಗಿಡುವ ಬೆಂಗಳೂರಿನ ಕೆ ಆರ್ ಮಾರುಕಟ್ಟೆ, ಮೆಜೆಸ್ಟಿಕ್ ಸುತ್ತಮುತ್ತ ಪ್ರದೇಶಗಳು ಜನರಿಲ್ಲದೆ, ಬಸ್ಸುಗಳಿಲ್ಲದೆ ಖಾಲಿ ಖಾಲಿಯಾಗಿ ಕಂಡುಬರುತ್ತಿದೆ.

ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಕೆಲವು ಸರ್ಕಾರಿ ಬಸ್ಸು ಮತ್ತು ಖಾಸಗಿ ಬಸ್ಸುಗಳು ಕೂಡ ಸಂಚರಿಸುತ್ತಿವೆ. ವೊಲ್ವೊ ಬಸ್ಸುಗಳ ಜೊತೆಗೆ ಖಾಸಗಿ ಬಸ್ ಸೇವೆ ಆರಂಭವಾಗಿದೆ. ಮೈಸೂರು, ವಿರಾಜಪೇಟೆ, ಗುಂಡ್ಲುಪೇಟೆಯಲ್ಲಿ ಸರ್ಕಾರಿ ಬಸ್ಸುಗಳು ಬೆಳಗ್ಗೆ 5 ಗಂಟೆಯಿಂದ ಸಂಚಾರ ಆರಂಭಿಸಿವೆ ಎಂದು ತಿಳಿದುಬಂದಿದೆ.

ಇನ್ನು ಕರ್ತವ್ಯಕ್ಕೆ ಹಾಜರಾಗಿರುವ 55 ವರ್ಷಕ್ಕೆ ಮೇಲ್ಪಟ್ಟ ಚಾಲಕರು ಮತ್ತು ನಿರ್ವಾಹಕರಿಗೆ ದೈಹಿಕ ಫಿಟ್ ನೆಸ್ ಬೇಕು, ದೈಹಿಕವಾಗಿ ಆರೋಗ್ಯದಲ್ಲಿ ಸದೃಢವಾಗಿದ್ದರೆ ಮಾತ್ರ ಕರ್ತವ್ಯದಲ್ಲಿ ಮುಂದುವರಿಯಲು ಸಾಧ್ಯ ಎಂದು ಬೆಂಗಳೂರು ಮಹಾನಗರ ಸಾರಿಗೆ ನಿಗಮ ಆದೇಶ ಮಾಡಿದೆ. ನಾಳೆಯೊಳಗೆ ನೌಕರರು ದೈಹಿಕ ಫಿಟ್ ನೆಸ್ ಸರ್ಟಿಫಿಕೇಟ್ ಇಲಾಖೆಗೆ ನೀಡಬೇಕು ಎಂದು ಹೇಳಿದೆ.

ಇನ್ನು ಕರ್ತವ್ಯಕ್ಕೆ ಹಾಜರಾಗದ ಮತ್ತಷ್ಟು ನೌಕರರನ್ನು ರಾಜ್ಯ ರಸ್ತೆ ಸಾರಿಗೆ ಇಲಾಖೆ ವಜಾ ಮಾಡಿದೆ. ಸಾರಿಗೆ ನೌಕರರು ಮುಷ್ಕರ ನಿಲ್ಲಿಸಲು ಹಲವಾರು ಬಾರಿ ಮನವಿ ಮಾಡಲಾಗಿದ್ದು ಇದು ಅಂತಿಮ ಕರೆ, ಮುಷ್ಕರ ಕೈಬಿಡಿ, ಕರ್ತವ್ಯಕ್ಕೆ ಹಾಜರಾಗಿ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ನೌಕರರಿಗೆ ಮನವಿ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com