ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರೈಟರ್ ಹತ್ಯೆ ಪ್ರಕರಣ: ಟಿಪ್ಪರ್ ಲಾರಿ ಚಾಲಕ, ಕ್ಲೀನರ್ ಸೇರಿ ಐವರ ಬಂಧನ

ಸೈಟ್ ರೈಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಲಾರಿ ಚಾಲಕ, ಕ್ಲೀನರ್ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ. 

ಬೆಂಗಳೂರು: ಸೈಟ್ ರೈಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಲಾರಿ ಚಾಲಕ, ಕ್ಲೀನರ್ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ. 

ಬಂಧಿತರನ್ನು ನಾಗರಾಜು, ಅರುಣ್ ರಾಥೋಡ್, ಮಂಜು, ಪರಶುರಾಮ ಅಲಿಯಾಸ್ ಮಂಜು ಹಾಗೂ ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕ ಬಂಧಿತ ಆರೋಪಿಗಳಾಗಿದ್ದಾರೆ. 

ತುರಹಳ್ಳಿ ಕಿರು ಅರಣ್ಯದ ದನದ ಗೇಟ್ ಬಳಿ ಮಾ.28ರಂದು ಸುಟ್ಟು ಕರಕಲಾಗಿದ್ದ ಅಪರಿಚಿತ ಮೃತದೇಹವೊಂದು ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ತಲಘಟ್ಟಪುರ ಸಮೀಪದ ಮಲ್ಲಸಂದ್ರದಲ್ಲಿ ರೈಟಲ್ ಆಗಿದ್ದ ಎ.ಆರ್.ರಾಜಕುಮಾರ್ ಅಲಿಯಾಸ್ ಅಮಿತ್ ಕುಮಾರ್ ಹತ್ಯೆಗೀಡಾಗಿರುವ ವಿಚಾರ ಬೆಳಕಿಗೆ ಬಂದಿತ್ತು.  

ಮೃತದೇಹದ ಗುರುತು ಪತ್ತೆಯಾದ ಬಳಿಕ ತನಿಖೆ ಚುರುಕುಗೊಳಿಸಿದ ತಲಘಟ್ಟಪುರ ಠಾಣೆ ಪೊಲೀಸರು, ಕೊನೆಗೆ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ನಗರ ತೊರೆಯಲು ಸಜ್ಜಾಗಿದ್ದ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.  

ತಲಘಟ್ಟಪುರ ಸಮೀಪದ ಮಲ್ಲಸಂದ್ರ ಗ್ರಾಮದಲ್ಲಿ ಶಶಿಕುಮಾರ್ ಅವರ ಬಳಿ ರಾಜಕುಮಾರ್ ಹಾಗೂ ಆರೋಪಿಗಳು ಕೆಲಸ ಮಾಡುತ್ತಿದ್ದರು. ಮಾಲೀಕರ ಜಮೀನಿನಲ್ಲಿ ನಾಲ್ಕು ಶೆಡ್ ಗಳಿದ್ದು, ಒಂದರಲ್ಲಿ ಆರೋಪಿ ಮತ್ತು ಕ್ಲೀನರ್ ನೆಲೆಸಿದ್ದರು. ಮತ್ತೊಂದು ಶೆಡ್ ನ್ನು ಟಿಪ್ಪರ್, ಇಟಾಚಿಗೆ ಸಂಬಂಧಿಸಿದ ಆಯಿಲ್, ಗ್ರೀಸ್ ಸೇರಿದಂತೆ ಇತರೆ ವಸ್ತುಗಳನ್ನು ಸಂಗ್ರಹಿಸುವ ಉಗ್ರಾಣವಾಗಿಸಿದ್ದರು. ಪಕ್ಕದ ಶೆಡ್'ನ್ನು ಆಫೀಸ್ ಮಾಡಿಕೊಂಡಿದ್ದು, ಅದರ ನಂತರದ ಶೆಟ್ ನಲ್ಲಿ ರೈಟರ್ ರಾಜಕುಮಾರ್ ನೆಲೆಸಿದ್ದ. ಟಿಪ್ಪರ್ ಚಾಲಕ ನಾಗರಾಜ್, ವಿಪರೀತ ಸಾಲ ಮಾಡಿಕೊಂಡಿದ್ದ. ಈ ಸಾಲ ಬಾಧೆಯಿಂದ ಹೊರಬರಲು ಆತ, ರೈಟರ್ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಈ ಹಿನ್ನೆಲೆಯಲ್ಲಿ ರೈಟರ್'ನ್ನು ಕೊಂದು ಬಳಿಕ ಆತನ ಬಳಿ ಇದ್ದ ಕಾರನ್ನು ದೋಚುವುದು ಹಾಗೂ ನಂತರ ತಾನೇ ರೈಟರ್ ಆಗುವ ದುರಾಲೋಚನೆ ಮಾಡಿದ್ದ. ಈ ಕೃತ್ಯಕ್ಕೆ ಚಾಲಕನಿಗೆ ಕ್ಲೀನರ್ ಸಾಥ್ ನೀಡಿದ್ದಾನೆ. ಅಂತೆಯೇ ಮಾ.22ರಂದು ರಾತ್ರಿ ರೈಟರ್ ನ್ನು ಶೆಡ್ ನಲ್ಲಿ ಹತ್ಯೆಗೈದ ಅವರು, ಮೃತನ ಕಾರಿನಲ್ಲೇ ಶವವನ್ನು ತುರಹಳ್ಳಿ ಅರಣ್ಯ ಬಳಿಗೆ ತಂದು ಟಿಪ್ಪರ್ ನಲ್ಲಿದ್ದ ಡೀಸೆಲ್ ಬಳಸಿ ಸುಟ್ಟು ಹಾಕಿ ಪರಾರಿಯಾಗಿದ್ದರು. ಮರುದಿನ ಮೃತದೇಹ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮೃತದೇಹದ ಪತ್ತೆಗೆ ರೇಖಾ ಚಿತ್ರವನ್ನು ಬಿಡಿಸಿ ಪೊಲೀಸರು, ಸಾರ್ವಜನಿಕರಿಗೆ ಹಂಚಿ ಮಾಹಿತಿ ಕೋರಿದ್ದರು. ಕೊನೆಗೆ ಮೊಬೈಲ್ ಕರೆಗಳು ಸುಳಿವು ನೀಡಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com