ಕೊರೋನಾ ಸಾವಿನ ಪ್ರಮಾಣ ಹೆಚ್ಚಳ: ಸಿಲಿಕಾನ್ ಸಿಟಿ ಚಿತಾಗಾರಗಳ ಮುಂದೆ ಸಾಲುಗಟ್ಟಿದ ಆ್ಯಂಬುಲೆನ್ಸ್!

ಕೊರೋನಾ ಸೋಂಕಿತರನ್ನು ಸೇರಿಸಲು ಹರಸಾಹಸಪಡುವ ಜೊತೆಗೆ ಮೃತಪಟ್ಟರೆ ಇದೀಗ ಅಂತ್ಯಸಂಸ್ಕಾರ ನಡೆಸಲೂ ಕೂಡ ಕುಟುಂಬದ ಸದಸ್ಯರು ಹೆಣಗಾಡುವ ಪರಿಸ್ಥಿತಿ ನಗರದಲ್ಲಿ ಎದುರಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಸೋಂಕಿತರನ್ನು ಸೇರಿಸಲು ಹರಸಾಹಸಪಡುವ ಜೊತೆಗೆ ಮೃತಪಟ್ಟರೆ ಇದೀಗ ಅಂತ್ಯಸಂಸ್ಕಾರ ನಡೆಸಲೂ ಕೂಡ ಕುಟುಂಬದ ಸದಸ್ಯರು ಹೆಣಗಾಡುವ ಪರಿಸ್ಥಿತಿ ನಗರದಲ್ಲಿ ಎದುರಾಗಿದೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂತಿಕರ ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಅಂತ್ಯಸಂಸ್ಕಾರಕ್ಕಾಗಿ ಚಿತಾಗಾರಗಳ ಮುಂದೆ ಮೃತದೇಹಗಳನ್ನು ಹೊತ್ತ ಆ್ಯಂಬುಲೆನ್ಸ್'ಗಳು ಗಂಟೆಗಟ್ಟಲೆ ಕಾಯುವಂತಾಗಿದೆ. 

ಯುಗಾದಿ ದಿನ ಮಂಗಳವಾರ ನಗರದಲ್ಲಿ 55 ಮಂದಿ ಸೋಂಕಿತರು ಮೃತಪಟ್ಟಿದ್ದರು. ಬುಧವಾರ 23 ಮಂದಿ ಸಾವನ್ನಪ್ಪಿದ್ದರು. ಇಷ್ಟೊಂದು ಶವಗಳನ್ನು ಒಂದೇ ದಿನ ದಹಿಸುವುದು ಕಷ್ಟವಾಗುತ್ತಿದೆ. 

ರಾಜರಾಜೇಶ್ವರಿ ನಗರ ವಲಯದ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರ ಮತ್ತು ಯಲಹಂಕ ವಲಯದ ಮೇದಿ ಅಗ್ರಹಾರ ವಿದ್ಯುತ್ ಚಿತಾಗಾರದ ಮುಂದೆ ಶವಗಳನ್ನು ಹೊತ್ತು ಸಾಲುಗಟ್ಟಿ ನಿಂತ ಆ್ಯಂಬುಲೆನ್ಸ್ ದೃಶ್ಯಗಳು ಬುಧವಾರ ಕಂಡು ಬಂದಿತು. 

ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರಕ್ಕೆ ಮಂಗಳವಾರ ಕೋವಿಡ್ ನಿಂದ ಮೃತಪಟ್ಟ 20 ಶವಗಳನ್ನು ತರಲಾಗಿತ್ತು. ಬುಧವಾರ ನಾಲ್ಕು ಶವಗಳು ಬಂದಿದ್ದವು. ಪ್ರತಿ ಶವದ ಅಂತ್ಯಕ್ರಿಯೆಗೆ ಮುಕ್ಕಾಲು ಗಂಟೆ ಬೇಕಾಗುತ್ತದೆ. ಕೆಲವೊಮ್ಮೆ ಶವ ಸಂಸ್ಕಾರಕ್ಕೂ ಮುನ್ನ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಿ ಮುಗಿಸಲು ತಡವಾಗುವುದರಿಂದ ಶವ ಅಂತ್ಯಕ್ರಿಯೆ ನಿಗದಿತ ಅವಧಿಯಲ್ಲಿ ಮುಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಶವಗಳನ್ನು ಸಂಬಂಧಿಕರು ಅ್ಯಂಬುಲೆನ್ಸ್ ನಲ್ಲಿ ತಂದು ವಿದ್ಯುತ್ ಚಿತಾಗಾರದ ಮುಂದೆ ನಿಲ್ಲಿಸಿದ್ದಾರೆಂದು ವಿದ್ಯುತ್ ಚಿತಾಗಾರದ ನಿರ್ವಹಣೆ ಮಾಡುವ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಮೇಶ್ ಅವರು ಮಾಹಿತಿ ನೀಡಿದರು. 

ಜನರು ಆನ್'ಲೈನ್ ಮೂಲಕ ಬುಕ್ ಮಾಡದ ಕಾರಣ ಈ ಪರಿಸ್ಥಿತಿ ಎದುರಾಗುತ್ತಿದೆ. ಆನ್'ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಂಡ ಸಂಬಂಧಿಕರ ಶವಸಂಸ್ಕಾರ ಕಾರ್ಯ ಪೂರ್ಣಗೊಳ್ಳುವವರೆಗೂ ಕಾಯಬೇಕಿರುವುದು ಅನಿವಾರ್ಯವಾಗಿದೆ. ಪರಿಸ್ಥಿತಿ ಕುರಿತು ಈಗಾಗಲೇ ವಲಯವಾರು ವಿಶೇಷ ಆಯುಕ್ತರಿಗೆ ಪರಿಸ್ಥಿತಿ ನಿಭಾಯಿಸುವಂತೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪು ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ.ವಿಜೇಂದ್ರ ಅವರು ಹೇಳಿದ್ದಾರೆ. 

ಎಲ್ಲಾ ನಾಗರೀಕರು ಮತ್ತು ಆಸ್ಪತ್ರೆಗಳು ಆನ್'ಲೈನ್ ಮೂಲಕ ಶವಸಂಸ್ಕಾರಕ್ಕೆ ಸ್ಲಾಟ್‌ಗಳನ್ನು ಕಾಯ್ದಿರಿಸಬೇಕಿದ್ದು, ಶವಾಗಾರಗಳ ಮುಂದೆ ಆ್ಯಂಬುಲೆನ್ಸ್ ಗಳನ್ನು ನಿಯೋಜಿಸಲಾಗಿಗೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಸ್ತುತ, ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಲ್ಕು ವಿದ್ಯುತ್ ಶವಾಗಾರಗಳನ್ನು ಕೋವಿಡ್ ಸಂತ್ರಸ್ತರಿಗಾಗಿ ಕಾಯ್ದಿರಿಸಲಾಗಿದೆ. ಕಲ್ಪಹಳ್ಳಿ, ಮೇದಿ ಅಗ್ರಹಾರ, ಸುಮನಹಳ್ಳಿ ಮತ್ತು ಕನತೂರ್ ನಲ್ಲಿ ಈ ಶವಾಗಾರಗಳಿವೆ. ಈ ನಾಲ್ಕು ವಿದ್ಯುತ್ ಶವಾಗಾರಗಳಲ್ಲಿ ಒಂದೊಂದರಲ್ಲೂ ಎರಡು ಯಂತ್ರಗಳಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com