ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಆದ್ಯತೆ: ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ 

ಐಟಿ-ಬಿಟಿ ಕಂಪೆನಿಗಳು ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕನ್ನಡಿಗರ ಬಗ್ಗೆ ಸಮೀಕ್ಷೆ ನಡೆಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ವರದಿ ಸಲ್ಲಿಸಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಐಟಿ-ಬಿಟಿ ಕಂಪೆನಿಗಳು ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕನ್ನಡಿಗರ ಬಗ್ಗೆ ಸಮೀಕ್ಷೆ ನಡೆಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ವರದಿ ಸಲ್ಲಿಸಲಿದೆ.

ಕರ್ನಾಟಕದಲ್ಲಿ ಸಾವಿರಾರು ಖಾಸಗಿ ಕಂಪೆನಿಗಳಿವೆ, ಅವುಗಳಲ್ಲಿ ಸಾರ್ವಜನಿಕ ವಲಯಗಳ ಅಡಿಯಲ್ಲಿ ಬರುವ ಸಂಸ್ಥೆಗಳು ಕೂಡ ಸೇರಿವೆ. ಇಲ್ಲಿ ಲಕ್ಷಾಂತರ ಮಂದಿ ಉದ್ಯೋಗಿಗಳಿದ್ದಾರೆ, ಇಂತಹ ಕಂಪೆನಿಗಳಲ್ಲಿ ಕೆಲವು ಕಂಪೆನಿಗಳು ಹೊರತುಪಡಿಸಿ ಬೇರೆಲ್ಲಾ ಕಡೆ ಕನ್ನಡಿಗೇತರು ಉದ್ಯೋಗದಲ್ಲಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ ಎಸ್ ನಾಗಾಭರಣ, ಕರ್ನಾಟಕದಲ್ಲಿ ಖಾಸಗಿ ಕಂಪೆನಿಗಳು ಹೂಡಿಕೆ ಮಾಡಲು ರಾಜ್ಯ ಸರ್ಕಾರ ಅವರಿಗೆ ಹಲವು ವಿನಾಯತಿಗಳನ್ನು ನೀಡಿದೆ. ತೆರಿಗೆಯಲ್ಲಿ ವಿನಾಯಿತಿ, ಭೂಮಿ ನೀಡಿಕೆಯಲ್ಲಿ ಸಬ್ಸಿಡಿ ಮತ್ತು ವಿದ್ಯುತ್ ಬಿಲ್ ನಲ್ಲಿ ಸಹ ಕಡಿತವನ್ನು ನೀಡುತ್ತಿದೆ. ಆದರೆ ಕಂಪೆನಿಗಳು ಕನ್ನಡಿಗರಿಗೆ, ಸ್ಥಳೀಯರಿಗೆ ಉದ್ಯೋಗ ನೀಡುವುದು ಕಡಿಮೆ. ಇಂತಹ ಕಡೆ ಎಷ್ಟು ಮಂದಿ ಕನ್ನಡಿಗರಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ ಎಂದರು.

ಖಾಸಗಿ ಕಂಪೆನಿಗಳು, ಸಂಸ್ಥೆಗಳಲ್ಲಿ ಎಷ್ಟು ಮಂದಿ ಸ್ಥಳೀಯ ಕನ್ನಡಿಗರು ಉದ್ಯೋಗದಲ್ಲಿದ್ದಾರೆ ಎಂದು ತಿಳಿದುಕೊಳ್ಳಲು ಈ ಸಮೀಕ್ಷೆ ಮಾಡಲಾಗುತ್ತಿದೆ. ಕಂಪೆನಿಗಳ ಮುಖ್ಯಸ್ಥರಿಗೆ ಪತ್ರ ಬರೆದು ಕನ್ನಡಿಗರು ಯಾವೆಲ್ಲಾ ವಿಭಾಗಗಳಲ್ಲಿ ಎಷ್ಟು ಮಂದಿ ಇದ್ದಾರೆ ಎಂದು ಅಂಕಿಅಂಶ ತಿಳಿಸಲು ಹೇಳಿದ್ದೇವೆ. ಅದಕ್ಕಾಗಿ ನಮ್ಮ ತಂಡವನ್ನು ಕಳುಹಿಸುತ್ತೇವೆ. ನಂತರ ಮುಂದಿನ ಕ್ರಮಕ್ಕಾಗಿ ವರದಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸುತ್ತೇವೆ ಎಂದು ಹೇಳಿದರು.

ಸ್ಥಳೀಯರಿಗೆ ಶೇಕಡಾ 100ರಷ್ಟು ಉದ್ಯೋಗ ಕಲ್ಪಿಸಬೇಕು ಎಂದು ಕಡ್ಡಾಯವಾಗಿ ಹೇಳುವ ಯಾವುದೇ ಕಾನೂನು ನಮ್ಮ ಮುಂದಿಲ್ಲ, ಇದಕ್ಕೆ ಸಾಕಷ್ಟು ಕಾನೂನು ತೊಡಕುಗಳಿವೆ ಎಂದರು.

ಕನ್ನಡ ಸಂಘಟನೆಗಳು ಸರೋಜಿನಿ ಮಹಿಶಿ ವರದಿಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸುತ್ತಿದ್ದು, ಕಂಪನಿಗಳು ಸ್ಥಳೀಯರಿಗೆ ನಿರ್ದಿಷ್ಟ ಪ್ರಮಾಣದ ಉದ್ಯೋಗಗಳನ್ನು ಮೀಸಲಿಡಬೇಕೆಂದು ಶಿಫಾರಸು ಮಾಡಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ಐಟಿ-ಬಿಟಿ ವಲಯವನ್ನು ಹೊರತುಪಡಿಸಿ, ಎಲ್ಲಾ ಖಾಸಗಿ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಶೇಕಡಾ 100 ರಷ್ಟು ಮೀಸಲಾತಿ ನೀಡುವ ಪ್ರಯತ್ನ ನಡೆದರೂ ಅದು ಕೈಗೂಡಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com