ವನ್ಯಜೀವಿ ಮಂಡಳಿಗೆ ನಾಮ ನಿರ್ದೇಶನ: ರಾಜ್ಯ ಸರ್ಕಾರಕ್ಕೆ 'ಹೈ' ನೋಟಿಸ್

ಪರಿಸರ ವಿಜ್ಞಾನಿ ಹಾಗೂ ಪರಿಸರವಾದಿ ಕೆಟಗಿರಿಯಡಿಯಲ್ಲಿ ಸಿದ್ಧಾರ್ಥ್ ಗೋಯೆಂಕಾ ಸೇರಿದಂತೆ 10 ಮಂದಿಯನ್ನು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪರಿಸರ ವಿಜ್ಞಾನಿ ಹಾಗೂ ಪರಿಸರವಾದಿ ಕೆಟಗಿರಿಯಡಿಯಲ್ಲಿ ಸಿದ್ಧಾರ್ಥ್ ಗೋಯೆಂಕಾ ಸೇರಿದಂತೆ 10 ಮಂದಿಯನ್ನು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ. 

ಸದಸ್ಯರ ನಾಮ ನಿರ್ದೇಶನವನ್ನು ಪ್ರಶ್ನಿಸಿ ಜಿ.ಎಂ.ಭೋಜರಾಜು ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. 

ಚೇತನ್ ಬಿ., ಸೋಮಶೇಖರ್ ಎ.ಆರ್‌., ಅಲೋಕ್ ವಿಶ್ವನಾಥ್ (ಯಲಹಂಕ ಶಾಸಕ ಎಸ್‌.ಆರ್. ವಿಶ್ವನಾಥ ಅವರ ಪುತ್ರ), ನವೀನ್ ಜೆ.ಎಸ್., ವಿನೋದ್‌ಕುಮಾರ್‌ ಬಿ. ನಾಯಕ, ದಿನೇಶ್ ಸಿಂಘ್ವಿ, ಕೆ.ಎಸ್‌.ಎನ್‌. ಚಿಕ್ಕೆರೂರು (ನಿವೃತ್ತ ಐಪಿಎಸ್ ಅಧಿಕಾರಿ), ತ್ಯಾಗ್‌ ಉತ್ತಪ್ಪ, ಜೋಸೆಫ್‌ ಹೂವರ್‌ ಅವರನ್ನು ಒಳಗೊಂಡಂತೆ ಮಂಡಳಿಯನ್ನು ಪುನರ್ ರಚಿಸಿ ಸರ್ಕಾರ 2020 ಅಕ್ಟೋಬರ್ 16ರಂದು ಅಧಿಸೂಚನೆ ಹೊರಡಿಸಿತ್ತು. 

ಈ ನೇಮಕವು ವನ್ಯಜೀವಿ ಕಾಯ್ದೆಯ ಸೆಕ್ಷನ್ 6(1)(ಡಿ) ಮತ್ತು (ಇ) ಅಡಿಯಲ್ಲಿನ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ. ಅಲ್ಲದೆ. ಇದು ರಾಜಕೀಯ ಪ್ರೇರಿತ ನೇಮಕವಾಗಿದ್ದು, ಒಂಬತ್ತು ಜನರಿಗೆ ಪರಿಸರ ವಿಜ್ಞಾನ ಮತ್ತು ಸಂರಕ್ಷಣೆ ಬಗ್ಗೆ ಆಳವಾದ ಜ್ಞಾನ ಇಲ್ಲ. ಅಲ್ಲದೇ, ಪರಿಶಿಷ್ಟ ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸುವ ಸದಸ್ಯರನ್ನು ಒಳಗೊಂಡಿಲ್ಲ. ಇದು ಕಾನೂನಿಗೆ ವಿರುದ್ಧವಾದ ನೇಮಕ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಶಾಸಕ ಎಸ್.ಆರ್. ವಿಶ್ವನಾಥ್ ಸಮ್ಮುಖದಲ್ಲಿ ಮಂಡಳಿಯ 15ನೇ ಸಭೆಯನ್ನು 2021ರ ಜನವರಿ 19ರಂದು ನಡೆಸಲಾಗಿದೆ. ಆ ಮೂಲಕ ವನ್ಯಜೀವಿ ಮಂಡಳಿಯ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಗ್ರೇಟರ್ ಹೆಸರುಘಟ್ಟ ಸಂರಕ್ಷಣಾ ಮೀಸಲು ಪ್ರದೇಶದ ಪ್ರಸ್ತಾವನೆ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ. ಮಂಡಳಿ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವನಾಥ್ ಅವರ ಆಣತಿಯಂತೆ ಈ ಪ್ರಸ್ತಾವನೆ ತಿರಸ್ಕರಿಸಿದ್ದಾರೆಂದು ಆರೋಪಿಸಿದ್ದಾರೆ. 

ಅರ್ಜಿ ಕುರಿತು ಕೆಲಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ವನ್ಯಜೀವಿ ಮಂಡಳಿ, ಸದಸ್ಯರಾದ ಸಿದ್ಧಾರ್ಥ ಗೋಯೆಂಕಾ, ಬಿ.ಚೇತನ್, ಡಾ.ಎ.ಆರ್. ಸೋಮಶೇಖರ್ ಸೇರಿದಂತೆ ಮಂಡಳಿಯ ಇತರೆ ಸದಸ್ಯರಿಗೆ ನೋಟಿಸ್ ಜಾರಿ ಮಾಡಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com