ಕೋವಿಡ್-19: ಸೋಂಕಿಗೊಳಗಾದ ಎಚ್‌.ಡಿ.ಕುಮಾರಸ್ವಾಮಿಗೂ ತಟ್ಟಿದ ಹಾಸಿಗೆ ಅಭಾವ!

ಮಹಾಮಾರಿ ಕೊರೋನಾ ವೈರಸ್ ಸೋಂಕಿಗೊಳಗಾಗಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಸ್ಪತ್ರೆಗೆ ದಾಖಲಾಗಲು ಹಾಸಿಗೆಗಾಗಿ ಪರದಾಡಿದ ಘಟನೆ ನಡೆದಿದೆ. 
ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಸೋಂಕಿಗೊಳಗಾಗಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಸ್ಪತ್ರೆಗೆ ದಾಖಲಾಗಲು ಹಾಸಿಗೆಗಾಗಿ ಪರದಾಡಿದ ಘಟನೆ ನಡೆದಿದೆ. 

ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕೆ ಹೋಗಿದ್ದ ಕುಮಾರಸ್ವಾಮಿ ಅವರಿಗೆ ಶುಕ್ರವಾರ ಸಂಜೆಯೇ ದಣಿವು ಕಾಣಿಸಿಕೊಂಡಿದೆ. ಹೀಗಾಗಿ ಬೆಂಗಳೂರಿಗೆ ಮರಳಿ, ಮನೆಗೆ ಹೋಗದೆ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು. 

ಇದರಂತೆ ಇಂದು ಬೆಳಿಗ್ಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದು, ಈ ವೇಳೆ ಕುಮಾರಸ್ವಾಮಿಯವರಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಳಿಕ ವೈದ್ಯರು ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದಾರೆ. 

ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲು ಮುಂದಾದ ಕುಮಾರಸ್ವಾಮಿಯವರು ಮಣಿಪಾಲ್ ಆಸ್ಪತ್ರೆಯನ್ನು ಸಂಪರ್ಕಿಸಿದ್ದಾರೆ. ಆದರೆ, ಈ ವೇಳೆ ಹಾಸಿಗೆ ಖಾಲಿಯಿಲ್ಲ ಎಂದು ಪ್ರತಿಕ್ರಿಯೆ ಬಂದಿದೆ. ಈ ನಡುವೆ ವಿಚಾರ ತಿಳಿದ ಕೂಡಲೇ ಆರೋಗ್ಯ ಸಚಿವ ಸುಧಾಕರ್ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಹಾಸಿಗೆ ದೊರಕಿಸಿ ಕೊಡಲು ಪ್ರಯತ್ನಿಸುತ್ತಿದ್ದಾರೆಂದು ತಿಳಿದುಬಂದಿದೆ. 

ಹಾಸಿಗೆ ದೊರೆತ ಕೂಡಲೇ ಕುಮಾರಸ್ವಾಮಿಯವರು ಆಸ್ಪತ್ರೆಗೆ ದಾಖಲಾಗಲಿದ್ದಾರೆಂದು ಕುಮಾರಸ್ವಾಮಿಯವರ ಕುಟುಂಬ ಮೂಲಗಳು ಮಾಹಿತಿ ನೀಡಿದೆ. 

ಈ ನಡುವೆ ಕುಮಾರಸ್ವಾಮಿಯವರಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾರೈಸಿದ್ದಾರೆ. 

ಯಡಿಯೂರಪ್ಪ ಅವರೂ ಕೂಡ ಕೊರೋನಾ ಸೋಂಕಿಗೊಳಗಾಗಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಿಂದಲೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಕುಮಾರಸ್ವಾಮಿಯವರಿಗೆ ಹಾರೈಸಿಸಿದ್ದಾರೆ.
 
ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರು ಟ್ವೀಟ್ ಮಾಡಿ, ಮಾಜಿ‌ ಮುಖ್ಯಮಂತ್ರಿಗಳು ಹಾಗೂ ನನ್ನ ತಂದೆ ಕುಮಾರಸ್ವಾಮಿ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಮತ್ತು ದೇವರ ದಯೆಯಿಂದ ಆದಷ್ಟು ಬೇಗ ಗುಣಮುಖರಾಗಲಿದ್ದಾರೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಯಾವುದೇ ಆತಂಕ ಬೇಡ ಎಂದು ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com