ಬೆಂಗಳೂರಿನಲ್ಲಿ ಕೊರೋನಾ ಸಮುದಾಯಕ್ಕೆ ಹರಡಿದೆ, ಕಠಿಣ ಕ್ರಮ ಅನಿವಾರ್ಯ: ಸಚಿವ ಡಾ ಕೆ ಸುಧಾಕರ್ 

ರಾಜ್ಯದಲ್ಲಿ ರೆಮೆಡಿಸಿವಿರ್ ಔಷಧಿ, ಆಕ್ಸಿಜನ್ ಗೆ ಕೊರತೆಯಿದೆ ಎಂದು ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ಡಾ ಕೆ ಸುಧಾಕರ್, ಬೆಂಗಳೂರಿನಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯುಂಟಾಗಿರಬಹುದು, ಆದರೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಲ್ಲ ಎಂದು ಹೇಳಿದ್ದಾರೆ.
ಆರೋಗ್ಯ ಸಚಿವ ಡಾ ಕೆ ಸುಧಾಕರ್
ಆರೋಗ್ಯ ಸಚಿವ ಡಾ ಕೆ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ರೆಮೆಡಿಸಿವಿರ್ ಔಷಧಿ, ಆಕ್ಸಿಜನ್ ಗೆ ಕೊರತೆಯಿದೆ ಎಂದು ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ಡಾ ಕೆ ಸುಧಾಕರ್, ಬೆಂಗಳೂರಿನಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯುಂಟಾಗಿರಬಹುದು, ಆದರೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಯವರು ಹಣ ಪಾವತಿಸದಿರುವುದರಿಂದ ಆಮ್ಲಜನಕ ಸಿಗದಿರಬಹುದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರತೆಯಿಲ್ಲ, ಸದ್ಯಕ್ಕೆ ರೆಮೆಡಿಸಿವಿರ್, ಆಕ್ಸಿಜನ್ ಕೊರತೆಯಿಲ್ಲ, ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡರು.

ರಾಜ್ಯದಲ್ಲಿ 800 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡುವ ಶಕ್ತಿ ನಮ್ಮಲ್ಲಿದೆ. ಈಗಿನ ಪರಿಸ್ಥಿತಿಯಲ್ಲಿ 200ರಿಂದ 300 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ. ಕೇಂದ್ರದಿಂದ 300 ಮೆಟ್ರಿಕ್ ಟನ್ ವಿತರಣೆಯಾಗಿದೆ. ಇನ್ನೂ ಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ, ಹೀಗಾಗಿ ಸದ್ಯಕ್ಕೆ ಆಕ್ಸಿಜನ್ ಕೊರತೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಗಳ ಕೊರತೆಯುಂಟಾಗದಂತೆ ವಲಯವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಐಸಿಯು ಬೆಡ್ ಹೆಚ್ಚಳಕ್ಕೆ ನಿತ್ಯ ಕ್ರಮ ವಹಿಸುತ್ತಿದ್ದೇವೆ ಎಂದಿದ್ದಾರೆ. 

ಬೆಂಗಳೂರಲ್ಲಿ ಪರಿಸ್ಥಿತಿ ಕಠಿಣ: ಕೊರೋನಾ ಎರಡನೇ ಅಲೆ ಬೆಂಗಳೂರು ನಗರದಲ್ಲಿ ಸಮುದಾಯಕ್ಕೆ ಹರಡಿದೆ, ಹೀಗಾಗಿಯೇ ಪ್ರತಿದಿನ ಶೇಕಡಾ 10ಕ್ಕೂ ಹೆಚ್ಚು ಪ್ರಕರಣಗಳು ನಗರದಲ್ಲಿ ವರದಿಯಾಗುತ್ತಿವೆ. ಬೆಂಗಳೂರಿಗೆ ವಿಶೇಷ ಕಠಿಣ ಕ್ರಮ, ಕಾರ್ಯಯೋಜನೆ ರೂಪಿಸುತ್ತೇವೆ ಎಂದು ಹೇಳಿದ್ದಾರೆ.

ನಾಳೆ ನಿರ್ಧಾರ: ಬೆಂಗಳೂರಿಗೆ ವಿಶೇಷವಾದ ಕಠಿಣ ನಿಯಮ ಜಾರಿಗೆ ತರುತ್ತೇವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದ್ದು, ನಾಳೆ ಬೆಂಗಳೂರಿನ ಎಲ್ಲಾ ಶಾಸಕರ ಸಭೆ ನಡೆಯುತ್ತದೆ, ಅದರಲ್ಲಿ ಎಲ್ಲರ ಜೊತೆ ಚರ್ಚಿಸಿ ಬೆಂಗಳೂರಿಗೆ ಬಿಗಿ ಕ್ರಮಕ್ಕೆ ನಿರ್ಧರಿಸುತ್ತೇವೆ. ಈಗಾಗಲೇ ಕೇಂದ್ರ ಸರ್ಕಾರ ಕೂಡ ಹೇಳಿದೆ, ತಾಂತ್ರಿಕ ಸಲಹಾ ಸಮಿತಿ ಕೂಡ ವರದಿ ನೀಡಿದೆ, ಇಲ್ಲಿ ವೈಯಕ್ತಿಕ ನಿಲುವು ಬೇಕಾದ್ದಲ್ಲ, ವೈಜ್ಞಾನಿಕ ನೆಲೆಗಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ಬೆಂಗಳೂರಿನಲ್ಲಿ ಕೊರೋನಾಗೆ ಸಂಬಂಧಪಟ್ಟಂತೆ ನಾನಾ ರೀತಿಯ ಸಮಸ್ಯೆಗಳಿವೆ, ಎರಡನೇ ಅಲೆ ತೀವ್ರವಾಗಿದೆ, ನಿತ್ಯ ದಾಖಲಾಗುತ್ತಿರುವ ಕೊರೇನಾ ಪ್ರಕರಣಗಳ ಸಂಖ್ಯೆ ಐದಂಕಿ ದಾಟುತ್ತಿದೆ. ಬೆಂಗಳೂರಿನಲ್ಲಿ ಅನೇಕ ಕಡೆ ರೆಮೆಡೆಸಿವಿರ್ ಔಷಧಿ, ಐಸಿಯು ಬೆಡ್ ಕೊರತೆ ವಿಪರೀತವಾಗಿದೆ, ಪರಿಸ್ಥಿತಿ ಕೈಮೀರುತ್ತಿದೆ ಎಂದು ಸಹ ಆರೋಗ್ಯ ಸಚಿವ ಸುಧಾಕರ್ ಒಪ್ಪಿಕೊಂಡಿದ್ದಾರೆ.
ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೋವಿಡ್ ನಿಂದ ದಾಖಲಾಗಿರುವ ಮುಖ್ಯಮಂತ್ರಿಗಳನ್ನು ಸಚಿವ ಡಾ ಸುಧಾಕರ್ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿ ಕೋವಿಡ್ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com