ಸಿಡಿ ಪ್ರಕರಣ ಸಿಬಿಐ ತನಿಖೆಯ ಆಗತ್ಯವಿಲ್ಲ: ಹೈಕೋರ್ಟ್

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ನಡೆಸುತ್ತಿರುವ ತನಿಖೆಯನ್ನು ಸದ್ಯಕ್ಕೆ ಸಿಬಿಐ ತನಿಖೆಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಶನಿವಾರ ಅಭಿಪ್ರಾಯಪಟ್ಟಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ನಡೆಸುತ್ತಿರುವ ತನಿಖೆಯನ್ನು ಸದ್ಯಕ್ಕೆ ಸಿಬಿಐ ತನಿಖೆಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಶನಿವಾರ ಅಭಿಪ್ರಾಯಪಟ್ಟಿದೆ. 

ತನಿಖೆಗೆ ಎಸ್ಐಟಿ ರಚಿಸಿ ನಗರ ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶ ರದ್ದತಿ ಕೋರಿ ಸಲ್ಲಿಸಿಕೆಯಾಗಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಶನಿವಾರ ವಿಚಾರಣೆ ನಡೆಸಿತು. 

ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ವಿಶೇಷ ತನಿಖಾ ತಂಡದ ಮುಖ್ಯಸ್ಥ ಸೌಮೇಂದು ಮುಖರ್ಜಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ತನಿಖಾ ವರದಿಯನ್ನು ಪರಿಶೀಲಿಸಿತು. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಮೂರು ಎಫ್ಐಆರ್​ಗಳಲ್ಲೂ ಎಸ್ಐಟಿ ತನಿಖೆ ನಡೆಸಿ ಪ್ರತ್ಯೇಕ ವರದಿಗಳನ್ನು ಸಲ್ಲಿಸಿದೆ. ಈ ಮೂರು ವರದಿಗಳಲ್ಲೂ ತನಿಖೆಗೆ ಸಂಬಂಧಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ವಿವರವಿದೆ. ಇವುಗಳನ್ನು ಗಮನಿಸಿದರೆ ಸದ್ಯಕ್ಕೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದಿತು.

ಅಲ್ಲದೆ ತನಿಖಾಧಿಕಾರಿಗಳು ಸಲ್ಲಿಸಿರುವ ವರದಿಯನ್ನು ಮುಚ್ಚಿದ ಲಕೋಟೆಯಲ್ಲೇ ಭದ್ರಪಡಿಸಿಡಲು ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದ ಪೀಠ, ಮುಂದಿನ ತನಿಖಾ ಪ್ರಗತಿ ವರದಿಯನ್ನು ಎಸ್ಐಟಿ ಮುಚ್ಚಿದ ಲಕೋಟೆಯಲ್ಲೇ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿತು. 

ಇದಕ್ಕೂ ಮುನ್ನ ಅರ್ಜಿದಾರ ವಕೀಲ ಉಮೇಶ್ ಪರ ವಾದ ಮಂಡಿಸಿದ ವಕೀಲ ಬಿ.ವಿ.ಶಂಕರನಾರಾಯಣ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ಸೋರಿಕೆಯಾಗುತ್ತಿದೆ. ಅದನ್ನೇ ಇಟ್ಟುಕೊಂಡು ಟಿವಿ ವಾಹಿನಿಗಳು ಮೀಡಿಯಾ ಟ್ರಯಲ್ ನಡೆಸುತ್ತಿವೆ. ಹೀಗಾಗಿ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿದರು. ವಾದ ತಿರಸ್ಕರಿಸಿದ ಪೀಠ, ಯಾವ ಶಾಸನಾತ್ಮಕ ಅಧಿಕಾರ ಬಳಸಿ ಸರ್ಕಾರ ಮಾಧ್ಯಮಗಳನ್ನು ನಿರ್ಬಂಧಿಸಬೇಕು. ನಿರ್ದಿಷ್ಟ ಸುದ್ದಿ ಸಂಸ್ಥೆ ಮಾಡಿರುವ ಉಲ್ಲಂಘನೆ ತೋರಿಸಿ ಎಂದು ಪ್ರಶ್ನಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com