ಕೋವಿಡ್-19: ಚಿಕಿತ್ಸೆಗೆ ಅಲ್ಲ... ಕೊರೋನಾ ಪರೀಕ್ಷೆಗೂ 'ಕ್ಯೂ' ನಿಲ್ಲುತ್ತಿದ್ದಾರೆ ಬೆಂಗಳೂರಿಗರು!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್-19 ಪರಿಸ್ಥಿತಿ ಕೈ ಮೀರುತ್ತಿದೆ ಎಂಬ ತಜ್ಞರ ಅಂತಕ ನಿಜವಾಗುತ್ತಿದ್ದು, ಚಿಕಿತ್ಸೆಗೆ ಬಿಡಿ.. ಕೋವಿಡ್ ಪರೀಕ್ಷೆಗೂ ಅನಾರೋಗ್ಯ ಪೀಡಿತ ಬೆಂಗಳೂರಿಗರು ಉದ್ಧದ ಸರತಿ ಸಾಲಲ್ಲ ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. 
ಸ್ವಾಬ್ ಸಂಗ್ರಹ ಕೇಂದ್ರ
ಸ್ವಾಬ್ ಸಂಗ್ರಹ ಕೇಂದ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್-19 ಪರಿಸ್ಥಿತಿ ಕೈ ಮೀರುತ್ತಿದೆ ಎಂಬ ತಜ್ಞರ ಅಂತಕ ನಿಜವಾಗುತ್ತಿದ್ದು, ಚಿಕಿತ್ಸೆಗೆ ಬಿಡಿ.. ಕೋವಿಡ್ ಪರೀಕ್ಷೆಗೂ ಅನಾರೋಗ್ಯ ಪೀಡಿತ ಬೆಂಗಳೂರಿಗರು ಉದ್ಧದ ಸರತಿ ಸಾಲಲ್ಲ ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಹೌದು.. ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19 ಪರಿಸ್ಥಿತಿ ಚಿಂತಾಜನಕವಾಗಿದ್ದು, ಅಗತ್ಯ ಚಿಕಿತ್ಸೆ ಸಿಗದೇ ಪರದಾಡುತ್ತಿರುವ ನಾಗರೀಕರು ಒಂದೆಡೆಯಾದರೆ, ಚಿಕಿತ್ಸೆ ಬಿಡಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲೂ ಕೂಡ ಸಾರ್ವಜನಿಕರು ಪರದಾಡುವ ಸ್ಥಿತಿ ಬಂದೊದಗಿದೆ. ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ  ಪರೀಕ್ಷಾ ಕೇಂದ್ರಗಳ ಮುಂದೆ ಉದ್ಧದ ಸರತಿ ಸಾಲಲ್ಲಿ ನಿಂತು ಗಂಟೆ ಗಟ್ಟಲೆ ಕಾದು ಪರೀಕ್ಷೆ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಹಲವು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಮಾಡಲೂ ಕೂಡ ಸಮಯವಿಲ್ಲದೆ ಹಲವು ನಾಗರೀಕರನ್ನು ವಾಪಸ್ ಕಳುಹಿಸಿ ಬೇರೊಂದು ದಿನ ಪರೀಕ್ಷೆ ಮಾಡಿಸಿಕೊಳ್ಳುವಂತೆ  ಸೂಚಿಸಲಾಗುತ್ತಿದೆ.

ಹಲವು ಕಚೇರಿಗಳಲ್ಲಿ ಕೆಲಸಕ್ಕೆ ತೆರಳಲು ಕೋವಿಡ್-19 ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದ್ದು, ಇದು ನಾಗರೀಕರು ಕೋವಿಡ್ ಪರೀಕ್ಷಾ ಕೇಂದ್ರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಲು ಕಾರಣವಾಗಿದೆ. ಆದರೆ ಈ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ನಿರೀಕ್ಷೆಗಿಂತ ಹೆಚ್ಚಿನ  ಸಂಖ್ಯೆಯಲ್ಲಿ ನಾಗರೀಕರು ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಅಲ್ಲದೆ ಪರೀಕ್ಷೆಯಲ್ಲಿನ ವಿಳಂಬ ಮತ್ತು ಪರೀಕ್ಷಾ ಕಿಟ್ ಗಳ ಕೊರತೆ ಕೂಡ ಪರೀಕ್ಷೆಗೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದೆ. 

ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಅಧಿಕಾರಿಗಳೂ ಕೂಡ ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ. ಅಂತೆಯೇ ಕಳೆದ ಮೂರು ದಿನಗಳಿಂದ ಸ್ವ್ಯಾಬ್ ಸಂಗ್ರಹ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಬರುತ್ತಿರುವ ಜನರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.  ಸರ್ಕಾರ ಉಚಿತವಾಗಿ ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿದೆಯಾದರೂ, ಸರತಿ ಸಾಲಲ್ಲಿ ಗಂಟೆಗಟ್ಟಲೆ ನಿಲ್ಲಲಾಗದ ಕೆಲವು ನಾಗರಿಕರು ಪಾವತಿ ಮಾಡಿ ಪರೀಕ್ಷೆಗೊಳಪಡಲು ಸಿದ್ಧರಾಗಿದ್ದಾರೆ. 

ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿರುವ ತಿಪ್ಪಸಂದ್ರ ನಿವಾಸಿ ಸುಮಲತಾ ಅವರು, ನನಗೆ ಕೋವಿಡ್ ಸೋಂಕು ದೃಢಪಟ್ಟಿದೆ. ನನ್ನ ಕುಟುಂಬ ಸದಸ್ಯರ ಸುರಕ್ಷತಾ ದೃಷ್ಟಿಯಿಂದ ಅವರನ್ನು ಪರೀಕ್ಷೆಗೊಳಪಡಿಸಲು ನಾನು ಮುಂದಾಗಿದ್ದೆ. ಇದಕ್ಕಾಗಿ ನಾನು ಬಿಬಿಎಂಪಿ ಅಧಿಕಾರಿಗಳು ಮತ್ತು ಖಾಸಗಿ  ಆಸ್ಪತ್ರೆಗಳಿಗೆ ಕರೆ ಮಾಡುತ್ತಲೇ ಇದ್ದೆ, ಆದರೆ ಯಾರಿಂದಲೂ ನನಗೆ ಸೂಕ್ತ ಪ್ರತಿಕ್ರಿಯ ಲಭಿಸಲಿಲ್ಲ. ನನ್ನನ್ನು ಇಡೀ ದಿನ ಕಾಯುವಂತೆ ಮಾಡಲಾಯಿತು. ಅನೇಕರು ನನ್ನನ್ನು ಸಂಪರ್ಕಿಸಲು ಇತರ ಸಂಖ್ಯೆಗಳನ್ನು ನೀಡಿದರೆ, ಕೆಲವರು ಮರುದಿನ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಹೇಳುತ್ತಿದ್ದಾರೆ ಎಂದು  ಹೇಳಿದ್ದಾರೆ.

ಅಂತೆಯೇ ಅಲಸೂರಿನ ನಿವಾಸಿ ದೀಪನ್ನಿತಾ (ಹೆಸರು ಬದಲಾಯಿಸಲಾಗಿದೆ), ಕಳೆದ ಕೆಲ ದಿನಗಳಿಂದ ನಾನು ಅಸ್ವಸ್ಥಳಾಗಿದ್ದೇನೆ. ಬಿಬಿಎಂಪಿ ಅಥವಾ ಖಾಸಗಿ ಲ್ಯಾಬ್‌ಗಳು ಮನೆಗೆ ಬಂದು ಮಾದರಿಗಳನ್ನು ತೆಗೆದುಕೊಳ್ಳಬೇಕೆಂದು ಬಯಸಿದ್ದೆ. ಇದಕ್ಕಾಗಿ ಹಲವರನ್ನು ದೂರವಾಣಿ ಕರೆ ಮೂಲಕ ಸಂಪರ್ಕಿಸಿದ್ದೆ.  ಆದರೆ ಯಾರೂ ಬರಲಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಹೋದರೆ ಅಲ್ಲಿ ತುಂಬಾ ಉದ್ದದ ಸರತಿ ಸಾಲು ಇತ್ತು. ಹೀಗಾಗಿ ನಾನು ಖಾಸಗಿ ಆಸ್ಪತ್ರೆಗೆ ಹೋಗಿದ್ದೆ. ಆದರೆ ಖಾಸಗಿ ಆಸ್ಪತ್ರೆಯೂ ನನ್ನನ್ನು ಕಳುಹಿಸಿ ಮರುದಿನ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವಂತೆ ಹೇಳಿದೆ ಎಂದು  ಅವರು ಹೇಳಿದರು.

ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ಅಧಿಕಾರಿಯೊಬ್ಬರು, ನಗರದಲ್ಲಿ ಕೋವಿಡ್ ಪರೀಕ್ಷೆಗೊಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೆಲವು ಪ್ರದೇಶಗಳು ಮಾದರಿ ಸಂಗ್ರಹಣೆಗೆ ಹೆಚ್ಚಿನ ಬೇಡಿಕೆಯನ್ನು ಕಾಣುತ್ತಿದ್ದೇವೆ. ಆದ್ದರಿಂದ ಹೆಚ್ಚುವರಿ ಮೊಬೈಲ್ ಸ್ವಾಬ್ ಸಂಗ್ರಹ ವ್ಯಾನ್‌ಗಳನ್ನು ನಿಯೋಜಿಸಲಾಗುವುದು  ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com