ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ಸಚಿವರ ಜೊತೆ ನಾನೇ ಹೋಗುತ್ತೇನೆ: ಡಿ.ಕೆ. ಶಿವಕುಮಾರ್
ಕೋವಿಡ್-19 ಪರಿಸ್ಥಿತಿ ಅರಿಯುವುದಕ್ಕಾಗಿ ರಾಜ್ಯಪಾಲರ ಸಭೆ ಮುಗಿದ, ಬಳಿಕ ಸಚಿವರ ಜೊತೆಗೆ ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ಬರಲು ಸಿದ್ಧವಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
Published: 20th April 2021 05:17 PM | Last Updated: 20th April 2021 05:44 PM | A+A A-

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು: ಕೋವಿಡ್-19 ಪರಿಸ್ಥಿತಿ ಅರಿಯುವುದಕ್ಕಾಗಿ ರಾಜ್ಯಪಾಲರ ಸಭೆ ಮುಗಿದ, ಬಳಿಕ ಸಚಿವರ ಜೊತೆಗೆ ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ಬರಲು ಸಿದ್ಧವಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಇದೇ ವೇಳೆ ಕೋವಿಡ್ ನಿಂದ ಮೃತಪಪಟ್ಟವರ ಅಂತಿಮ ಸಂಸ್ಕಾರ ಸರ್ಕಾರಿ ಜಾಗದಲ್ಲಿ ಗೌರವಯುತವಾಗಿ ಆಗಲಿ ಎಂದು ಶಿವಕುಮಾರ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶವ ಸಂಸ್ಕಾರಕ್ಕೂ ತೊಂದರೆಯಾಗುತ್ತಿರುವುದು ಕಂದಾಯ ಸಚಿವರಿಗೆ ಗೊತ್ತಾಗಬೇಕು. ಸರತಿ ಸಾಲಿನಲ್ಲಿ ನಿಂತು ಹೆಣ ಸುಡುವಂತೆ ಮಾಡುತ್ತಿದ್ದಾರೆ. ಸರ್ಕಾರ ಕೊರೋನಾದಿಂದ ಮೃತಪಟ್ಟವರು ಎಷ್ಟು ಮಂದಿ ಎಂಬುದನ್ನು ಲೆಕ್ಕಪರಿಶೋಧನೆ ಮಾಡಬೇಕು ಎಂದರು.
ಕೋವಿಡ್ ಕುರಿತು ಬರೀ ಸಭೆಗಳನ್ನು ಮಾಡುವುದನ್ನು ಬಿಟ್ಟರೆ ಸರ್ಕಾರ ಬೇರೇನೂ ಮಾಡುತ್ತಿಲ್ಲ. ಇಂತಹ ಬೇಜವಾಬ್ದಾರಿ ಸರ್ಕಾರವನ್ನು ನೋಡಿ ಹಳ್ಳಿಯ ಜನರು ನಗುತ್ತಿದ್ದಾರೆ. ಪಿಎಂ , ಸಿಎಂ ಕೇರ್ ನಲ್ಲಿ ಹಣ ಎಷ್ಟು ಬಂದಿತು ಎಂಬ ಬಗ್ಗೆ ಜನರಿಗೆ ಲೆಕ್ಕ ಕೊಡಬೇಕು.
ಮೊದಲು ಸಿಎಂ, ಪಿಎಂ ಕೊರೊನ ವ್ಯಾಕ್ಸಿನ್ ತೆಗೆದುಕೊಂಡು ನಂತರ ಬೇರೆಯವರಿಗೆ ಕೊಡಬೇಕಿತ್ತು. ಆದರೆ ಇವರು ಮಾಡಿದ್ದೇನು? ನಿಮಗೆ ಆಡಳಿತ ಮಾಡುವುದಕ್ಕೆ ಬರುವುದಿಲ್ಲ ಎಂದ ಮೇಲೆ ಸರ್ಕಾರ ಪತನಗೊಳಿಸಬೇಕಿತ್ತು. ಸರ್ಕಾರ ಇನ್ನೂ ಮಲಗಿದೆ ಎದ್ದಿಲ್ಲ, ಬರಿ ಮೀಟಿಂಗ್ ಮಾಡಿಕೊಂಡು ಇದೆ ಎಂದು ಡಿಕೆಶಿ ಕುಟುಕಿದರು.
ರಾಜ್ಯಪಾಲರ ಸಭೆ ಮುಗಿದ ಬಳಿಕ ಸಚಿವರ ಜೊತೆಗೆ ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ಬರಲು ಸಿದ್ಧವಿರುವುದಾಗಿ ಹೇಳಿದ ಡಿ.ಕೆ.ಶಿವಕುಮಾರ್, ವಾಸ್ತವಾಂಶ ಅರಿಯೋಣ ಬನ್ನಿ. ಹೋಗೋಣ. ರಾಜ್ಯಪಾಲರ ಸಭೆ ಮುಗಿಯಲಿ.ಬೇರೆ ರಾಜ್ಯದ ಪರಿಸ್ಥಿತಿಯೇ ಬೇರೆ . ನಮ್ಮ ರಾಜ್ಯದ ಪರಿಸ್ಥಿತಿಯೇ ಬೇರೆ. ನಮ್ಮ ಸರ್ಕಾರಕ್ಕೆ ನಮ್ಮಲ್ಲಿ ರಾತ್ರಿ ಕೊರೋನಾ ಮಲಗಿರುತ್ತದೆ, ಹಗಲಿನಲ್ಲಿ ಪ್ರಪಂಚದಲ್ಲಿ ನಮ್ಮ ರಾಜ್ಯವನ್ನು ಗಮನಿಸುತ್ತಿದ್ದಾರೆ ಎಂದರು.
ರಾಜ್ಯಪಾಲರ ಆಹ್ವಾನದ ಮೇರೆ ಅವರಿಗೆ ಗೌರವ ಕೊಟ್ಟು ಸರ್ವ ಪಕ್ಷ ನಾಯಕರ ಸಭೆಗೆ ಹಾಜರಾಗುತ್ತಿದ್ದೇವೆ. ರಾಜ್ಯಪಾಲರ ಸಭೆ ಸಂವಿಧಾನದ ಯಾವ ಅಡಿಯಲ್ಲಿ ಕರೆದಿದ್ದಾರೆ ಎಂದು ಗೊತ್ತಿಲ್ಲ, ಕರೆಯಬಹುದಾ ಎಂದು ಗೊತ್ತಿಲ್ಲ. ಸಿಎಂ ಆಸ್ಪತ್ರೆಗೆ ದಾಖಲಾಗಿರುವ ಕಾರಣ ರಾಜ್ಯಪಾಲರು ಸಭೆ ಮಾಡುತ್ತಾರೆ ಎಂದು ನಮಗೆ ನೊಟೀಸ್ ಬಂದಿದೆ. ರಾಜ್ಯಪಾಲರು ಯಾವ ಅಡಿಯಲ್ಲಿ ಕರೆದಿದ್ದಾರೆ ಎಂದು ಗೊತ್ತಿಲ್ಲ. ಇದನ್ನು ಕಾನೂನು ಸಚಿವರು ಹೇಳಬೇಕು. ಇವರು ಹೇಳಿದಂತೆ ನಾವೇ ಎಲ್ಲವನ್ನು ಮಾಡಿದ್ದೇವೆ. ರಾಜ್ಯದಲ್ಲಿ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ರಾಜ್ಯಪಾಲರು ಬಂದಿದ್ದಾರೆ. 1,20,000 ಜನರಿಗೆ ಪೂರ್ವಭಾವಿ ಎಚ್ಚರಿಕೆ ನೀಡುವಂತೆ ತಜ್ಞರು ಹೇಳಿದರೂ ಕೇಳದೆ ಆರೋಗ್ಯ ಸಚಿವರು ಕೇವಲ ಪೇಪರ್ ಬಗ್ಗೆ ಮಾತನಾಡುತ್ತಿದ್ದಾರೆ. ಐಎಎಸ್, ಕೆಎಎಸ್ ಅಧಿಕಾರಿಗಳನ್ನೆಲ್ಲ ಬಳಸಿಕೊಂಡು ಸರ್ಕಾರ ಸಮರೋಪಾದಿಯಲ್ಲಿ ಯುದ್ಧದಂತೆ ಕೆಲಸ ಮಾಡಬೇಕು.ಕೋವಿಡ್ ಅನ್ನು ಸರಿಯಾದ ರೀತಿಯಲ್ಲಿ ಗಮನಿಸದೇ ಇರುವುದು ಸರ್ಕಾರದ ಬೇಜವಾಬ್ದಾರಿತನ" ಎಂದು ಟೀಕಿಸಿದರು.