ರಾಜ್ಯದಲ್ಲಿ ಆಮ್ಲಜನಕ ಅಭಾವ: ಆರೋಗ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಪೂರೈಕೆದಾರರಿಗೆ ಸರ್ಕಾರ ಸೂಚನೆ

ರಾಜ್ಯದಲ್ಲಿ ಒಂದೆಡೆ ಕೊರೋನಾ ಆರ್ಭಟಿಸುತ್ತಿದ್ದರೆ, ಮತ್ತೊಂದೆಡೆ ರೋಗಿಗಳ ಚಿಕಿತ್ಸೆಗೆ ಪ್ರಮುಖವಾಗಿರುವ ಆಮ್ಲಜನಕ ಅಭಾವ ಎದುರಾಗಿದೆ. ಹೀಗಾಗಿ ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಕೊರೋನಾ ಆರ್ಭಟಿಸುತ್ತಿದ್ದರೆ, ಮತ್ತೊಂದೆಡೆ ರೋಗಿಗಳ ಚಿಕಿತ್ಸೆಗೆ ಪ್ರಮುಖವಾಗಿರುವ ಆಮ್ಲಜನಕ ಅಭಾವ ಎದುರಾಗಿದೆ. ಹೀಗಾಗಿ ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. 

ಕೋವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಕೆ ಮತ್ತು ಲಭ್ಯತೆಯ ಬಗ್ಗೆ ವಿಧಾನಸೌಧದಲ್ಲಿ ಸೋಮವಾರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಬೃಹತ್ ಕೈಗಾಲಿಕೆ ಸಚಿವ ಜಗದೀಶ್ ಶೆಟ್ಟರ್ ಮತ್ತು ಸಂಸದ ತೇಜಸ್ವಿ ಸೂರ್ಯ ಅಧ್ಯಕ್ಷತೆಯಲ್ಲಿ ಆಮ್ಲಜನಕ ಪೂರೈಕೆದಾರರ, ಉತ್ಪಾದಕ ಸಂಸ್ಥೆಗಳ ಜೊತೆ ಸೋಮವಾರ ಸಭೆ ನಡೆಯಿತು. 

ಈ ವೇಳೆ ಮಾತನಾಡಿರುವ ಸಚಿವ ಜಗದೀಶ್ ಶೆಟ್ಟರ್ ಅವರು, ಬೆಂಗಳೂರಲ್ಲಿ ಆಮ್ಲಜನಕ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಆಮ್ಲಜನಕಕ್ಕೆ ಹೆಚ್ಚಿನ ಬೇಡಿಕೆಯಿದೆ. ರಾಜ್ಯಕ್ಕೆ ಅಗತ್ಯ ಇರುವಷ್ಟು ಆಮ್ಲಜನಕದ ಉತ್ಪಾದನೆ ಆಗುತ್ತಿದೆ. ಸಿಲಿಂಡರ್ ಗಳ ಕೊರತೆ ಇದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ. ನಗರಕ್ಕೆ ತಲುಪುವ ಆಮ್ಲಜನಕವನ್ನು ಸರಿಯಾದ ರೀತಿಯಲ್ಲಿ ಮತ್ತು ಪ್ರಮಾಣದಲ್ಲಿ ಆಸ್ಪತ್ರೆಗಳಿಗೆ ತಲುಪಿಸಲು ಸೂಕ್ತ ವಿಧಾನವನ್ನು ರೂಪಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆಂದು ಹೇಳಿದ್ದಾರೆ. 

ಆಮ್ಲಜನಕ ಉತ್ಪಾದನೆ ಮಾಡುವ ಉತ್ಪಾದಕರ ಜೊತೆ ಸಮಾಲೋಚನೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಲಾಗಿದೆ. ಜನರ ಆರೋಗ್ಯ ಕಾಪಾಡುವುದು ಮೊದಲ ಆದ್ಯತೆ ಆಗಿದೆ. ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆ ಮಾಡಬೇಕು. ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಕೆ ಕಡಿಮೆ ಮಾಡಬೇಕು ಎಂದು ತಿಳಿಸಿದರು. 

ಸಚಿವ ಸೂಧಾಕರ್ ಅವರು ಮಾತನಾಡಿ, ಬೇಡಿಕೆಗೆ ತಕ್ಕಷ್ಟು ಆಮ್ಲಜನಕ ಉತ್ಪಾದನೆ ಮತ್ತು ಪೂರೈಕೆ ಮಾಡಬೇಕು. ಬೇಡಿಕೆಗೆ ತಕ್ಕಂತೆ ಆಮ್ಲಜನರ ಪೂರೈಕೆಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಏ.30ರವರೆಗೆ ಇರುವ ಬೇಡಿಕೆಯನ್ನು ನೋಡಿಕೊಂಡು ಸಿದ್ಧತೆ ಮಾಡಿಕೊಳ್ಳಬೇಕು. ಕೈಗಾರಿಕೆ ಬಳಕೆಗೂ ಆಮ್ಲಜನಕ ಅಗತ್ಯ ಇದೆ. ಆದರೆ, ರಾಜ್ಯದ ಆರೋಗ್ಯ ಕ್ಷೇತ್ರಕ್ಕೆ ಆಮ್ಲಜನಕವನ್ನು ಪ್ರಥಮ ಆತ್ಯತೆಯಲ್ಲಿ ಪೂರೈಸಬೇಕು ಎಂದು ಸೂಚಿಸಿದರು. 

ರಾಜ್ಯದಲ್ಲಿ ಆಮ್ಲಜನಕಕ್ಕೆ ಯಾವುದೇ ಕೊರತೆಯಾಗದಂತೆ ಉತ್ಪಾದನೆ ಮಾಡಬೇಕು ಹಾಗೂ ಸಿಲಿಂಡರ್ ಗಳನ್ನು ಪೂರೈಕೆ ಮಾಡಬೇಕು. ಬೆಂಗಳೂರು ನಗರದಲ್ಲಿ 3500 ರಷ್ಟು ಸಿಲಿಂಡರ್ ಬೇಡಿಕೆಯಿದ್ದು, ಇದಕ್ಕೆ ತಕ್ಕಂತೆ ಪೂರೈಕೆಯಾಗಬೇಕು ಎಂದು ಹೇಳಿದರು. ಸಚಿವರ ಈ ನಿರ್ದೇಶನಕ್ಕೆ ಉತ್ಪಾದಕ ಸಂಸ್ಥೆಗಳು, ಪೂರೈಕೆದಾರರು ಒಪ್ಪಿಗೆ ನೀಡಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com