ಮೈಸೂರು: ಗ್ರಂಥಾಲಯ ಮರು ನಿರ್ಮಾಣಕ್ಕೆ ಸರ್ಕಾರ ನೆರವು; ದಾನಿಗಳ ರೂ.28 ಲಕ್ಷ ವಾಪಸ್ ನೀಡಲು ನಿರ್ಧಾರ
ಬೆಂಕಿಗೆ ಆಹುತಿಯಾಗಿದ್ದ ಸೈಯದ್ ಇಸಾಕ್ ಅವರ ಗ್ರಂಥಾಲಯವನ್ನು ಮರುನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲಾಗಿದ್ದ ರೂ.28 ಲಕ್ಷ ಹಣವನ್ನು ವಾಪಸ್ ನೀಡಲು ನಿರ್ಧರಿಸಲಾಗಿದೆ.
Published: 21st April 2021 01:06 PM | Last Updated: 21st April 2021 02:25 PM | A+A A-

ಸೈಯದ್ ಇಸಾಕ್
ಮೈಸೂರು: ಬೆಂಕಿಗೆ ಆಹುತಿಯಾಗಿದ್ದ ಸೈಯದ್ ಇಸಾಕ್ ಅವರ ಗ್ರಂಥಾಲಯವನ್ನು ಮರುನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲಾಗಿದ್ದ ರೂ.28 ಲಕ್ಷ ಹಣವನ್ನು ವಾಪಸ್ ನೀಡಲು ನಿರ್ಧರಿಸಲಾಗಿದೆ.
ಇನ್ಫೊಸಿಸ್ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಫತೇನ್ ಮಿಸ್ಬಾ ಎಂಬುವವರು ಗ್ರಂಥಾಲಯ ಮರು ನಿರ್ಮಾಣಕ್ಕಾಗಿ ಫಂಡ್ ರೈಸರ್ ಅಭಿಯಾನ ಆರಂಭಿಸಿದ್ದರು. 'ಕೆಟ್ಟೊ’ ವೆಬ್ ತಾಣದಲ್ಲಿ ಫತೇನ್ ಮಿಸ್ಬಾ ಅವರು ಕ್ರೌಡ್ ಫಂಡಿಂಗ್ ಆರಂಭಿಸಿದ್ದರು. ಬಳಿಕ 1,800ಕ್ಕೂ ಅಧಿಕ ಮಂದಿ ದೇಣಿಗೆ ನೀಡಿದ್ದರು. ಅಭಿಯಾನ ಆರಂಭವಾದ ಕೆಲವೇ ದಿನಗಳಲ್ಲಿ ರೂ.28 ಲಕ್ಷ ಸಂಗ್ರವಾಗಿತ್ತು.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮೈಸೂರು ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಂಥಾಲಯ ಇಲಾಖೆಯು ಮೇಯರ್ ನೇತೃತ್ವದ ಗ್ರಂಥಾಲಯ ಸಮಿತಿಗೆ ಗ್ರಂಥಾಲಯ ಮರು ನಿರ್ಮಿಸುವ ಹೊಣೆ ನೀಡಿದ್ದವು.
ಬಳಿಕ ಸರ್ಕಾರವೇ ಗ್ರಂಥಾಲಯವನ್ನು ಮರು ನಿರ್ಮಿಸಲು ಮುಂದೆ ಬಂದಿರುವಾಗ ಸಾರ್ವಜನಿಕರ ಹಣ ಏಕೆ ಬೇಕು’ ಎಂದು ದಾನಿಗಳು ಸೇರಿದಂತೆ ಹಲವರು ಟ್ವಿಟರ್ನಲ್ಲಿ ಪ್ರಶ್ನಿಸಿದ್ದರು.
ದಾನಿಗಳ ಅಭಿಪ್ರಾಯ ಸಂಗ್ರಹ ಬಳಿಕ ಫತೇನ್ ಮಿಸ್ಬಾ ಅವರು, ಹಣವನ್ನು ವಾಪಸ್ ನೀಡಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಗ್ರಂಥಾಲಯ ಮರುನಿರ್ಮಾಣಕ್ಕೆ ಸರ್ಕಾರವೇ ಮುಂದೆ ಬಂದಿದೆ. ಹೀಗಾಗಿ ನಾವು ಅಭಿಯಾನವನ್ನು ನಿಲ್ಲಿಸಿದ್ದು, ದಾನಿಗಳ ಅಭಿಪ್ರಾಯಗಳ ಬಳಿಕ ಹಣವನ್ನು ಹಿಂತಿರುಗಿಸುತ್ತಿದ್ದೇವೆಂದು ಫತೇನ್ ಮಿಸ್ಬಾ ಹೇಳಿದ್ದಾರೆ.