ಬೆಂಗಳೂರಿನಲ್ಲಿ ಕೊರೋನಾ ಅಬ್ಬರ: ಐಸಿಯು ಬೆಡ್ ಗಳಿಗೆ ಹೆಚ್ಚಿದ ಬೇಡಿಕೆ

ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಆರ್ಭಟಿಸುತ್ತಿದ್ದು, ಎಲ್ಲೆಲ್ಲೂ ಐಸಿಯು ಬೆಡ್ ಗಳಿಗೆ ಬೇಡಿಕೆಗಳು ಹೆಚ್ಚಾಗತೊಡಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಆರ್ಭಟಿಸುತ್ತಿದ್ದು, ಎಲ್ಲೆಲ್ಲೂ ಐಸಿಯು ಬೆಡ್ ಗಳಿಗೆ ಬೇಡಿಕೆಗಳು ಹೆಚ್ಚಾಗತೊಡಗಿದೆ. 

ಬಿಬಿಎಂಪಿ ಅಧಿಕಾರಿಗಳು ನೀಡಿರುವ ಮಾಹಿತಿಗಳ ಪ್ರಕಾರ, ಬಿಬಿಎಂಪಿ ಮಟ್ಟದಲ್ಲಿರುವ ಕೋವಿಡ್-19 ಆಸ್ಪತ್ರೆ (ಸಿಹೆಚ್'ಬಿಎಸ್) ಗಳಲ್ಲಿ ಕೇವಲ ಒಂದು ಐಸಿಯು ವೆಂಟಿಲೇಟರ್ ಹಾಸಿಗೆ ಇರುವುದು ಹಾಗೂ ಯಾವುದೇ ಆಸ್ಪತ್ರೆಗಳಲ್ಲಿಯೂ ಐಸಿಯು ಬೆಡ್ ಗಳು ಇಲ್ಲದಿರುವುದು ಕಂಡು ಬಂದಿದೆ. 

ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸರ್ಕಾರಿ ಹೆಚ್ಎಸ್ಐಎಸ್ ಗೋಶಾ ಆಸ್ಪತ್ರೆ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೇವಲ ಎರಡು ಹಾಸಿಗೆಗಳು ಖಾಲಿ ಇರುವುದು ಕಂಡು ಬಂದಿದೆ. 

ಪರಿಸ್ಥಿತಿ ಗಂಭೀರವಾಗಿದೆ. ಪ್ರತೀನಿತ್ಯ 15-20 ಮಂದಿ ಗಂಭೀರ ಸ್ಥಿತಿಯಲ್ಲಿರುವುದು ಕಂಡು ಬರುತ್ತಿದೆ. ಅವರಿಗೆ ಐಸಿಯು ಅಗತ್ಯವಿದೆ. ಆದರೆ, ಅವರಿಗೆ ಐಸಿಯು ಬೆಡ್ ನೀಡಲು ನಮಗೆ ಸಾಧ್ಯವಾಗುತ್ತಿಲ್ಲ. ನಾವೀಗ ಐಸಿಯು ಬೆಡ್ ಗಳ ಸಂಖ್ಯೆ ಹೆಚ್ಚಿಸಲೇಬೇಕಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಹಿರಿಯ ವೈದ್ಯರು ಹೇಳಿದ್ದಾರೆ. 

ಆದರೆ, ಈ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು, ಖಾಸಗಿ ಆಸ್ಪತ್ರೆಯ ವೈದ್ಯರು ನಿರಾಕರಿಸಿದ್ದು, ಸಿಹೆಚ್'ಬಿಎಸ್ ವರದಿ ಸರಿಯಿರುವುದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ 33 ಐಸಿಯು ಹಾಸಿಗೆ, 19 ಐಸಿಯು ಹಾಸಿಗೆಗಳು ಖಾಲಿಯಿವೆ ಎಂದು ಎಂದು ಹೇಳಿದ್ದಾರೆ. 

ವಾರ್ಡ್ ಗಳಲ್ಲಿ ಕೋವಿಡೇತರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಇದ್ದಕ್ಕಿದ್ದಂತೆ ಸ್ಥಳಾಂತರ ಮಾಡಲು ಸಾಧ್ಯವಿಲ್ಲ. ಪರಿಸ್ಥಿತಿ ನಿಭಾಯಿಸಲು ನಮ್ಮಿಂದ ಸಾಧ್ಯವಾದಷ್ಟು ಶ್ರಮ ಪಡುತ್ತಿದ್ದೇವೆಂದು ಮೈಸೂರು ಮಣಿಪಾಲ್ ಆಸ್ಪತ್ರೆಯ ವೈದ್ಯ ಸತ್ಯನಾರಾಯಣ ಅವರು ಹೇಳಿದ್ದಾರೆ. 

ಖಾಸಗಿ ಆಸ್ಪತ್ರೆಯೊಂದರ ಹಿರಿಯ ವೈದ್ಯರೊಬ್ಬರು ಮಾತನಾಡಿ, ಹಾಸಿಗೆ ಲಭ್ಯತೆ ಕುರಿತು ನಾವು ಮಾಹಿತಿ ಸಂಗ್ರಹಿಸಲೇಬೇಕಿದೆ. ಮಾಹಿತಿ ಸಂಗ್ರಹಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿದೆ. ಈ ಕಾರ್ಯದಿಂದ ಸಾಕಷ್ಟು ಜನರ ಜೀವ ಉಳಿಸಬಹುದು ಎಂಬುದು ನಮಗೆ ಅರ್ಥವಾಗುತ್ತದೆ. ಆದರೆ, ಇಷ್ಟು ಕೆಲಸ ಮಾಡಲು ನಮ್ಮಲ್ಲಿ ಸಿಬ್ಬಂದಿಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಜಯದೇವ ಆಸ್ಪತ್ರೆಯ ವೈದ್ಯ ಸಿಎನ್.ಮಂಜುನಾಥ್ ಅವರು ಮಾತನಾಡಿ, ಐಸಿಯುವಿಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಏರುತ್ತಲೇ ಇದೆ. ರೂಪಾಂತರಿ ಕೊರೋನಾ ಸಾಕಷ್ಟು ಪರಿಣಾಮ ಬೀರುತ್ತಿದೆ. ಸಾಕಷ್ಟು ಸೋಂಕಿತರು ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಮೊದಲ ಅಲೆಗೆ ಹೋಲಿಸಿದರೆ ಕೊರೋನಾ 2ನೇ ಅಲೆಯಲ್ಲಿ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ಸಾಕಷ್ಟು ಜನರಲ್ಲಿ ಉಸಿರಾಟ ಸಮಸ್ಯೆ, ಕೆಮ್ಮು, ಅತೀವ್ರ ಜ್ವರ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. 

ಸರ್ಕಾರ ಶೀಘ್ರಗತಿಯಲ್ಲಿ ಕಾರ್ಯಮಗ್ನರಾಗಬೇಕಿದೆ. ಆಸ್ಪತ್ರೆಗಳೊಂದಿಗೆ ಸೂಕ್ತ ಸಂವಹನ ನಡೆಸಬೇಕಿದೆ. ಯಾವಾಗ ಆಸ್ಪತ್ರೆಗೆ ದಾಖಲಾಗಬೇಕು, ಎಲ್ಲಿಯವರೆಗೂ ಮನೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂಬ ಮಾಹಿತಿಯನ್ನು ಸರ್ಕಾರ ಜನರಿಗೆ ತಿಳಿಸಬೇಕಿದೆ. ಎಲ್ಲರೂ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂಬುದನ್ನು ತಿಳಿಸಬೇಕಿದೆ. ಪ್ರತೀ ವಾರ್ಡ್ ನಲ್ಲಿಯೂ ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕಿದೆ. ಇದರಿಂದ ಸಾವಿನ ಸಂಖ್ಯೆ ಕಡಿಮೆಯಾಗಲಿದೆ ಎಂದು ಬಯೋಎಥಿಕ್ಸ್ ಸಂಶೋಧಕ ಅನಂತ್ ಭನ್ ಅವರು ಹೇಳಿದ್ದಾರೆ. 

ಹಾಸಿಗೆ ಹಂಚಿಕೆ ತೃಪ್ತಿ ತರುತ್ತಿಲ್ಲ. ಹೀಗಾಗಿ ನಾವು ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಸಂಖ್ಯೆ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇನೆ. ಶೀಘ್ರದಲ್ಲಿಯೇ ಈ ಕಾರ್ಯವನ್ನು ಮಾಡಲಾಗುತ್ತದೆ. ಶೀಘ್ರದಲ್ಲೇ ಜನರು ಸಂಕಷ್ಟಗಳಿಂದ ದೂರಾಗಲಿದ್ದಾರೆಂದು ಸಚಿವ ಸುಧಾಕರ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com