ಎರಡನೇ ಬಾರಿ ಕೊರೋನಾ ಗೆದ್ದ ಮುಖ್ಯಮಂತ್ರಿ ಯಡಿಯೂರಪ್ಪ: ಆಸ್ಪತ್ರೆಯಿಂದ ಬಿಡುಗಡೆ, ಇಂದು ಸಚಿವ ಸಂಪುಟ ಸಭೆ 

ಕೋವಿಡ್-19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ವೈದ್ಯರಿಗೆ ಧನ್ಯವಾದ ಹೇಳಿದ ಸಿಎಂ ಯಡಿಯೂರಪ್ಪ
ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ವೈದ್ಯರಿಗೆ ಧನ್ಯವಾದ ಹೇಳಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಕೋವಿಡ್-19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗುರುವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಬೆಳಗಾವಿಯಲ್ಲಿ ಲೋಕಸಭಾ ಉಪ ಚುನಾವಣೆಯ ಪ್ರಚಾರಕ್ಕೆ ಹೋದವರು ಜ್ವರ, ಸುಸ್ತು ಕಾಣಿಸಿಕೊಂಡು ಪ್ರವಾಸವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದರು. ನಂತರ ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಾಗ ಕೊರೋನಾ ಪಾಸಿಟಿವ್ ಬಂದಿತ್ತು.

ಬಳಿಕ ಮೊನ್ನೆ ಏಪ್ರಿಲ್ 16ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿ 6 ದಿನಗಳಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ 78 ವರ್ಷದ ಮುಖ್ಯಮಂತ್ರಿ ಯಡಿಯೂರಪ್ಪನವರು ಎರಡನೇ ಬಾರಿಗೆ ಕೊರೋನಾ ಸೋಂಕಿನಿಂದ ಗೆದ್ದು ಬಂದಿದ್ದಾರೆ. 

ಆಸ್ಪತ್ರೆಯ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಆರೋಗ್ಯವಾಗಿ ಬಂದಿದ್ದೇನೆ, ಎಂದಿನಂತೆ ದಿನನಿತ್ಯದ ಕೆಲಸದಲ್ಲಿ ತೊಡಗುತ್ತಿದ್ದು, ಇಂದು ಸಂಜೆ 4 ಗಂಟೆಗೆ ಸಚಿವ ಸಂಪುಟ ಸಭೆಯಿದೆ, ಅದರಲ್ಲಿ ಮುಂದಿನ ದಿನಗಳಲ್ಲಿ ಕೊರೋನಾ ತಡೆಗಟ್ಟುವಿಕೆಗೆ ರಾಜಧಾನಿ ಮತ್ತು ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗುವುದು, ಕೊರೋನಾ ತಡೆಗಟ್ಟಲು ಇನ್ನಷ್ಟು ಕಠಿಣ ನಿಯಮ ಮುಂದಿನ ದಿನಗಳಲ್ಲಿ ಅನಿವಾರ್ಯವೇ ಎಂದು ಸಹ ಪರಿಶೀಲಿಸಲಾಗುವುದು ಎಂದು ಹೇಳಿದರು.

ಕೊರೋನಾ ವೈರಸ್ ತಡೆಗಟ್ಟುವಲ್ಲಿ ರಾಜ್ಯದ ಜನತೆ ಸಹಕಾರ ನೀಡಿ, ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ, ಮಾಸ್ಕ್ ಧರಿಸದೆ ದಂಡ ಕಟ್ಟುವ ಸನ್ನಿವೇಶ ತಂದುಕೊಳ್ಳಬೇಡಿ, ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ, ಎಲ್ಲರೂ ಒಗ್ಗಟ್ಟಿನಿಂದ ಸೋಂಕು ವಿರುದ್ಧ ಹೋರಾಡೋಣ ಎಂದು ಕರೆ ನೀಡಿದರು.

ರಾಜ್ಯ ಸರ್ಕಾರ ಮಟ್ಟದಲ್ಲಿ ನಾನು ಮತ್ತು ಸಚಿವರುಗಳು ನಿರಂತರವಾಗಿ ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ಆಯಾ ಜಿಲ್ಲೆಗಳಲ್ಲಿರುವಂತೆ ಹೇಳಿ ಅಲ್ಲಿನ ಸ್ಥಿತಿಗತಿ ಬಗ್ಗೆ ಚರ್ಚಿಸಿ ಲಸಿಕೆ, ಆಸ್ಪತ್ರೆಗಳಲ್ಲಿ ಬೆಡ್, ಐಸಿಯು ಚಿಕಿತ್ಸೆ, ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com