ಕೋವಿಡ್ ಟೆಸ್ಟಿಂಗ್‌ನಲ್ಲಿ ವ್ಯಾಪಕ ಗೋಲ್ ಮಾಲ್: ಹಣ ಕೊಟ್ಟರೆ ಬೇಕಾದಂತ ರಿಪೋರ್ಟ್- ಕಾಂಗ್ರೆಸ್ 

ಕೋವಿಡ್ ಟೆಸ್ಟಿಂಗ್ ನಲ್ಲಿ ವ್ಯಾಪಕ ಗೋಲ್ ಮಾಲ್ ನಡೆಯುತ್ತಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ಸೋಂಕಿತ ಸರ್ಕಾರದಿಂದ ಕೊರೋನಾ ಸೋಂಕು ನಿರ್ವಹಣೆ ಅಸಾಧ್ಯ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ ಟೆಸ್ಟಿಂಗ್ ನಲ್ಲಿ ವ್ಯಾಪಕ ಗೋಲ್ ಮಾಲ್ ನಡೆಯುತ್ತಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ಸೋಂಕಿತ ಸರ್ಕಾರದಿಂದ ಕೊರೋನಾ ಸೋಂಕು ನಿರ್ವಹಣೆ ಅಸಾಧ್ಯ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.

ಈ ಕುರಿತು ಪ್ರದೇಶ ಕಾಂಗ್ರೆಸ್ ಟ್ವೀಟರ್  ಖಾತೆಯಲ್ಲಿ ಸರಣಿ ಟ್ವೀಟ್ ಮಾಡಲಾಗಿದ್ದು, ಸಚಿವರ ಹೆಸರಲ್ಲೂ ರಿಪೋರ್ಟ್, ಪಾಸಿಟಿವ್ ಬೇಕಿದ್ರೆ ಪಾಸಿಟಿವ್, ನೆಗೆಟಿವ್ ಬೇಕಿದ್ರೆ ನೆಗೆಟಿವ್, ಹಣ ಕೊಟ್ಟರೆ ಬೇಕಾದಂತೆ ರಿಪೋರ್ಟ್ ಕೊಡಲಾಗುತ್ತಿದೆ. ಅಧಿಕಾರಿಗಳೊಂದಿಗೆ ಸರ್ಕಾರ ಸೇರಿಕೊಂಡು ಕೊರೋನಾ ಹೆಸರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದೆ. ಸರ್ಕಾರಕ್ಕೆ ಸೋಂಕು ತಗುಲಿ ಸೋಂಕಿತ ಸರ್ಕಾರ ಆಗಿರುವಾಗ ಜನತೆಯ ಸೋಂಕು ದೂರಾಗಲೂ ಸಾಧ್ಯವೇ? ಎಂದು ಪ್ರಶ್ನಿಸಿದೆ.

ಕೊರೋನಾ ಟೆಸ್ಟಿಂಗ್ ನಲ್ಲಿನ ವ್ಯಾಪಕ ಭ್ರಷ್ಟಾಚಾರದಲ್ಲಿ ಮಂತ್ರಿಗಳಿಗೆಷ್ಟು ಪಾಲು? ಅಧಿಕಾರಿಗಳಿಗೆ ಎಷ್ಟು ಪಾಲು?  ನಿಮಗೆಷ್ಟು ಪಾಲು ಎಂದು ಸಚಿವ ಸುಧಾಕರ್ ಅವರನ್ನು ಪ್ರಶ್ನಿಸಿರುವ ಕಾಂಗ್ರೆಸ್,   ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಬೇಜವಾಬ್ದಾರಿತನವೇ ಜನರ ಸಾವಿಗೆ ಹೊಣೆ ಎಂದು ಆರೋಪಿಸಿದೆ. 

ಬಿಜೆಪಿ ಸರ್ಕಾರ ಪಿಎಂ ಕೇರ್ಸ್ ನಲ್ಲಿ ರಾಜ್ಯಕ್ಕೆ ಹೆಚ್ಚಿನ ವೆಂಟಿಲೇಟರ್ ಗಳಿಗೆ ಬೇಡಿಕೆ ಏಕೆ ಇಟ್ಟಿಲ್ಲ? ಕಳೆದ ನವೆಂಬರ್ ನಲ್ಲಿಯೇ ತಜ್ಞರು ಎಚ್ಚರಿಕೆ ನೀಡಿದ್ದಾಗ್ಯೂ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಕ್ರಮ ಕೈಗೊಂಡಿಲ್ಲವೇಕೆ? ಎಂದು ಪ್ರಶ್ನಿಸಿರುವ ಕಾಂಗ್ರೆಸ್,  ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವವರಿಗೆ ನಿರ್ಬಂಧವಿಲ್ಲ, ಗಡಿಗಳನ್ನು ಬಂದ್ ಮಾಡಿಲ್ಲ, ಹೀಗಿರುವಾಗ ಸೋಂಕಿತರನ್ನು ಸೋಂಕನ್ನು ನಿಯಂತ್ರಿಸುವುದು ಹೇಗೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದೆ.

ಕೇಂದ್ರ ಸರ್ಕಾರಕ್ಕೆ ಸುಮಾರು 10 ಕೋಟಿಗೂ ಹೆಚ್ಚು ಡೋಸ್ ಗಳನ್ನು 150 ರೂಪಾಯಿಗೆ ನೀಡಿದ್ದ ಲಸಿಕೆ ಕಂಪನಿಗಳು ಹೊಸದಾಗಿ ದರ ಪರಿಷ್ಕರಣೆ ಮಾಡಿ ರಾಜ್ಯಗಳಿಗೆ 400 ರೂ. ದರ ನಿಗದಿಪಡಿಸಿವೆ. ರಾಜ್ಯ ಸರ್ಕಾರ ಸರ್ವರಿಗೂ ಉಚಿತ ಲಸಿಕೆ ನೀಡುವ ಘೋಷಣೆಯನ್ನೇಕೆ ಮಾಡುತ್ತಿಲ್ಲ? ಲಸಿಕೆ ಖರೀದಿಗೆ ಹಣ ಕ್ರೋಢಿಕರಣದ ಬಗ್ಗೆ ಏಕೆ ಯೋಚಿಸುತ್ತಿಲ್ಲ ಎಂದು ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆಗರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com