ನನ್ನ ಶತ್ರುಗಳಿಗೂ ಈ ಕೊರೋನಾ ಬರೋದು ಬೇಡ, ದಯವಿಟ್ಟು ಯಾರೂ ನಿರ್ಲಕ್ಷ್ಯ ಮಾಡಬೇಡಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ 

ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಕುಟುಂಬಸ್ಥರು ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಸೋಮವಾರ ಬಿಡುಗಡೆ ಹೊಂದಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಬಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಬಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಕುಟುಂಬಸ್ಥರು ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಸೋಮವಾರ ಬಿಡುಗಡೆ ಹೊಂದಿದ್ದಾರೆ.

ಕಳೆದ ಏಪ್ರಿಲ್ 15ರಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಅವರ ತಾಯಿ, ಇಬ್ಬರು ಸೋದರಿಯರು, ಮನೆಯ ಅಡುಗೆ ಭಟ್ಟನಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಟ್ಟು ಅದು ಗುಣವಾಗಿರಲಿಲ್ಲ. ನಂತರ ಮೂರು ದಿನ ಬಿಟ್ಟು ಆಸ್ಪತ್ರೆಗೆ ದಾಖಲಾದರು. ಇಂದು ಐವರೂ ಗುಣಮುಖರಾಗಿ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ಇನ್ನೊಂದು ವಾರ ಕ್ವಾರಂಟೈನ್ ನಲ್ಲಿರುತ್ತಾರೆ.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕಿ ಹೆಬ್ಬಾಳ್ಕರ್, ಆರಂಭದಲ್ಲಿ ಕೊರೋನಾಗೆ ನಾವು ಕೂಡ ನಿರ್ಲಕ್ಷ್ಯ ಮಾಡಿದೆವು. ಆದರೆ ಸಾಧ್ಯವಾದಷ್ಟು ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಬಳಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಹೊರಗೆ ಆದಷ್ಟು ಓಡಾಡದಿರುವುದು ಮಾಡಬೇಕು.

ಮಾಧ್ಯಮಗಳಲ್ಲಿ ಆಸ್ಪತ್ರೆಗಳಲ್ಲಿ ವೈದ್ಯರು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ಕೆಲವು ವರದಿಗಳು ಬಂದಿವೆ, ಆದರೆ ನಮಗೆ ಸರಿಯಾದ ಚಿಕಿತ್ಸೆ ಸಿಕ್ಕಿದೆ, ಯಾವ ಹೊತ್ತಿನಲ್ಲಿ ಕರೆದರೂ ಬಂದು ನೋಡುತ್ತಿದ್ದರು, ನೀಡಬೇಕಾದ ಚಿಕಿತ್ಸೆ ನೀಡುತ್ತಿದ್ದರು, ನಮ್ಮ ತಾಯಿಯವರನ್ನು ಕೂಡ ಚೆನ್ನಾಗಿ ನೋಡಿಕೊಂಡಿದ್ದಾರೆ. ಕೊರೋನಾ ವಾರಿಯರ್ಸ್ ದೇವರ ತರಹ ಕೆಲಸ ಮಾಡುತ್ತಿದ್ದಾರೆ, ತಮ್ಮ ಜೀವದ ಹಂಗನ್ನು ತೊರೆದು ಸಮಾಜದ ಜನರಿಗಾಗಿ ದುಡಿಯುತ್ತಿದ್ದಾರೆ ಎಂದು ಹೊಗಳಿದರು.

ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕೊರೋನಾ ನಿಯಂತ್ರಣಕ್ಕೆ ನಾವು ನಾಗರಿಕರು ಜವಾಬ್ದಾರಿಯಿಂದ ವರ್ತಿಸಬೇಕು. ನಾವೆಲ್ಲರೂ ಬದುಕಬೇಕಾಗಿದೆ.

15ಕ್ಕೆ ಪರೀಕ್ಷೆ ಮಾಡಿದಾಗ ನಮ್ಮ ಮನೆಯಲ್ಲಿ 18 ಜನರಿಗೆ ಸಹ ಕೊರೋನಾ ಪಾಸಿಟಿವ್ ಬಂದಿತ್ತು. ಇವತ್ತು ದೇವರ ದಯೆಯಿಂದ ಎಲ್ಲರೂ ಗುಣಮುಖರಾಗಿದ್ದೇವೆ ಎಂದರು.

ವೈರಿಗಳಿಗೆ ಬರುವುದು ಬೇಡ: ಈ ಕೊರೋನಾ ನಿಜಕ್ಕೂ ಮಹಾಮಾರಿ. ನಮ್ಮ ಶತ್ರುಗಳಿಗೂ ಇದು ಬರುವುದು ಬೇಡ ಎಂದು ಕೇಳಿಕೊಳ್ಳುತ್ತೇನೆ. ಕೊರೋನಾ ನಿಜಕ್ಕೂ ಕೆಟ್ಟ ರೋಗ, ಹಾಗೆಂದು ಭಯಪಡಬೇಕಾಗಿಲ್ಲ, ವೈದ್ಯರು ನೋಡಿಕೊಳ್ಳುತ್ತಾರೆ, ಸಾಧ್ಯವಾದಷ್ಟು ಜಾಗ್ರತರಾಗಿರೋಣ ಎಂದರು.

ಲಾಕ್ ಡೌನ್ ಜಾರಿ ಮಾಡಿ: ಕಳೆದ ವರ್ಷ ತಿಂಗಳುಗಟ್ಟಲೆ ಕೊರೋನಾ ಲಾಕ್ ಡೌನ್ ಆಗಿತ್ತು, ಆ ಸಮಯದಲ್ಲಿ ಏನೇನು ಸಮಸ್ಯೆಗಳಾಗಿತ್ತು ಎಂದು ನಾವೆಲ್ಲರೂ ನೋಡಿದ್ದೇವೆ, ಅನುಭವಿಸಿದ್ದೇವೆ.ಈಗ ಅನಿವಾರ್ಯ ಪರಿಸ್ಥಿತಿಯಿದೆ, ಈಗ ಕರ್ಫ್ಯೂ ಜಾರಿ ಮಾಡಲಿಲ್ಲ ಎಂದಾದರೆ ಇದು ಅತಿರೇಕಕ್ಕೆ ಹೋಗಬಹುದು. ಒಂದು ವಾರದಿಂದ 10 ದಿನಗಳ ಮಟ್ಟಿಗಾದರೂ ಕರ್ಫ್ಯೂವನ್ನು ಜಾರಿ ಮಾಡಿದರೆ ಕೊರೋನಾ ಎರಡನೇ ಅಲೆಯನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು ಎಂದರು.

ಜನತಾ ಕರ್ಫ್ಯೂ ಮಾಡಿದರೆ ಜನರಿಗೆ ತಿಳುವಳಿಕೆ ಬರುವುದಿಲ್ಲ. ಹೀಗಾಗಿ ಕಟ್ಟುನಿಟ್ಟಾಗಿ ಸರ್ಕಾರ ಲಾಕ್ ಡೌನ್ ನ್ನು ಜಾರಿ ಮಾಡಲಿ ಎಂದು ಅಭಿಪ್ರಾಯಪಟ್ಟರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com