ರಾಜ್ಯಾದ್ಯಂತ ಏಪ್ರಿಲ್ 27 ರಾತ್ರಿಯಿಂದ 14 ದಿನ 'ಕೊರೋನಾ ಕರ್ಫ್ಯೂ', 18 ವರ್ಷ ಮೇಲ್ಪಟ್ಟವರಿಗೂ ಉಚಿತ ಲಸಿಕೆ: ಸಿಎಂ ಬಿಎಸ್ ಯಡಿಯೂರಪ್ಪ
ರಾಜ್ಯದಲ್ಲಿ ಭಯಾನಕ ರೀತಿಯಲ್ಲಿ ವ್ಯಾಪಿಸುತ್ತಿರುವ ಮಹಾಮಾರಿ ಕೋವಿಡ್-19 ನಿಯಂತ್ರಣಕ್ಕೆ ನಾಳೆ ರಾತ್ರಿಯಿಂದ ಮುಂದಿನ 14 ದಿನ ರಾಜ್ಯಾದ್ಯಂತ ಕೊರೋನಾ ಕರ್ಫ್ಯೂವನ್ನು ಸರ್ಕಾರ ವಿಸ್ತರಿಸಿದೆ.
Published: 26th April 2021 02:28 PM | Last Updated: 26th April 2021 04:56 PM | A+A A-

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಬೆಂಗಳೂರು: ರಾಜ್ಯದಲ್ಲಿ ಭಯಾನಕ ರೀತಿಯಲ್ಲಿ ವ್ಯಾಪಿಸುತ್ತಿರುವ ಮಹಾಮಾರಿ ಕೋವಿಡ್-19 ನಿಯಂತ್ರಣಕ್ಕೆ ನಾಳೆ ರಾತ್ರಿಯಿಂದ ಮುಂದಿನ 14 ದಿನ ರಾಜ್ಯಾದ್ಯಂತ ಕೊರೋನಾ ಕರ್ಫ್ಯೂವನ್ನು ಸರ್ಕಾರ ವಿಸ್ತರಿಸಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 15 ದಿನದ ಬಳಿಕವೂ ಪರಿಸ್ಥಿತಿ ಮತ್ತೆ ಹತೋಟಿಗೆ ಬಾರದಿದ್ದಲ್ಲಿ ಮತ್ತೆ ಈ ನಿಯಮ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಕೋವಿಡ್- ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಮಹಾರಾಷ್ಟ್ರ ಮೀರಿಸಿ, ಬೆಂಗಳೂರು ಸುತ್ತಮುತ್ತ ಜಾಸ್ತಿಯಾಗುತ್ತಿದೆ.ಸಚಿವ ಸಂಪುಟದ ಸಹೋದ್ಯೋಗಿಗಳು, ತಜ್ಞರೊಂದಿಗೆ ಸಮಾಲೋಚಿಸಿ ಕೆಲವು ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ 18 ರಿಂದ 45 ವಯಸ್ಸಿನೊಳಗಿರುವವರಿಗೆ ಲಸಿಕೆಯನ್ನು ಉಚಿತವಾಗಿ ಪೂರೈಕೆ ನೀಡಲಾಗುವುದು. ನಾಳೆ ರಾತ್ರಿಯಿಂದ ಇಡೀ ರಾಜ್ಯಾದಂತ್ಯ ಮುಂದಿನ 14 ದಿನಗಳ ಕಾಲ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಬೆಳಿಗ್ಗೆ 6 ರಿಂದ 10 ಗಂಟೆ ನಡುವೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. 10 ಗಂಟೆ ನಂತರ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಲಿವೆ. ಗಾರ್ಮೆಂಟ್ಸ್ ನೌಕರರನ್ನು ಹೊರತುಪಡಿಸಿ, ಉತ್ಪಾದನಾ, ಕೃಷಿ, ಕಟ್ಟಡ, ವೈದ್ಯಕೀಯ ಚಟುವಟಿಕೆಗಳು ಮುಂದುವರೆಯುತ್ತವೆ ಎಂದರು.
ಈ ಅವಧಿಯಲ್ಲಿ ಬಿಎಂಟಿಸಿ,ಕೆಎಸ್ ಆರ್ ಟಿಸಿ, ಮೆಟ್ರೋ ಸೇರಿದಂತೆ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿರುವುದಿಲ್ಲ. ಅಂತರ್ ರಾಜ್ಯ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಆದರೆ. ಸರಕು- ಸಾಗಾಣಿಕೆ ವಾಹನಗಳಿಗೆ ಮಾತ್ರ ಈ ಅವಧಿಯಲ್ಲಿ ವಿನಾಯಿತಿ ನೀಡಲಾಗಿದೆ. ಸೋಂಕು ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು, ತಾಲೂಕ್ ನಲ್ಲಿ ತಹಸೀಲ್ದಾರ್ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.
ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಲ್ಲ. 800 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ರೆಮಿಡಿಸಿವಿಯರ್ ಚುಚ್ಚುಮದ್ದಿನ ಲಭ್ಯತೆಯಲ್ಲೂ ವ್ಯತ್ಯಯವಾಗಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.