ಬಹುಕೋಟಿ ಐಎಂಎ ಹಗರಣ: ರೋಶನ್ ಬೇಗ್, ಮನ್ಸೂರ್ ಖಾನ್ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌

ಮಾಜಿ ಕಾಂಗ್ರೆಸ್ ಸಚಿವ ಆರ್. ರೋಶನ್ ಬೇಗ್ ಅವರ ಡ್ಯಾನಿಶ್ ಪಬ್ಲಿಕೇಶನ್ಸ್, ಐಎಂಎ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ಮತ್ತು ಕಂಪನಿಯ ಇತರ ನಿರ್ದೇಶಕರ ವಿರುದ್ಧ ಕೇಂದ್ರ ತನಿಖಾ ದಳ(ಸಿಬಿಐ) ನ್ಯಾಯಾಲಯಕ್ಕೆ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ.
ರೋಷನ್ ಬೇಗ್
ರೋಷನ್ ಬೇಗ್

ಬೆಂಗಳೂರು: ಮಾಜಿ ಕಾಂಗ್ರೆಸ್ ಸಚಿವ ಆರ್. ರೋಶನ್ ಬೇಗ್ ಅವರ ಡ್ಯಾನಿಶ್ ಪಬ್ಲಿಕೇಶನ್ಸ್, ಐಎಂಎ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ಮತ್ತು ಕಂಪನಿಯ ಇತರ ನಿರ್ದೇಶಕರ ವಿರುದ್ಧ ಕೇಂದ್ರ ತನಿಖಾ ದಳ(ಸಿಬಿಐ) ನ್ಯಾಯಾಲಯಕ್ಕೆ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ. 

ರೋಷನ್ ಬೇಗ್ ತಮ್ಮ ಚುನಾವಣಾ ವೆಚ್ಚಕ್ಕಾಗಿ ಐಎಂಎ ನಿಧಿಯಿಂದ ಹಲವಾರು ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ತಮ್ಮ ಸಂಸ್ಥೆ ಡ್ಯಾನಿಶ್ ಪಬ್ಲಿಕೇಶನ್ಸ್‌ನ ನೌಕರರ ವೇತನ ಸೇರಿದಂತೆ ದಿನನಿತ್ಯದ ಖರ್ಚಿಗೆ ಬಳಸಿಕೊಳ್ಳುತ್ತಿದ್ದರು. ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಲು ಅವರು ತಮ್ಮ ಕ್ಷೇತ್ರದಲ್ಲಿ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಈ ಹಣವನ್ನು ವೆಚ್ಚ ಮಾಡಿದ್ದಾರೆ ಎಂದು ಸಿಬಿಐ ವಕ್ತಾರರು ಹೇಳಿದರು.

ಸುಮಾರು ಒಂದು ಲಕ್ಷ ಮಂದಿ ಹೂಡಿಕೆದಾರರಿಂದ ಅನಧಿಕೃತ ಠೇವಣಿ ಮೂಲಕ ಐಎಂಎ ಸುಮಾರು 4000 ಕೋಟಿ ರೂ.ಗಳ ಅಕ್ರಮ ಹಣವನ್ನು ಸಂಗ್ರಹಿಸಿದೆ ಎಂದು ಸಿಬಿಐ ತಿಳಿಸಿದೆ. ಅಲ್ಲದೆ ಆ ಹಣವನ್ನು ಬೇಗ್‌ ಬಳಸಿಕೊಳ್ಳುತ್ತಿದ್ದರು. ಇದರಿಂದಾಗಿ ಐಎಂಎ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಬೇಕಾಯಿತು ಎಂದು ಸಿಬಿಐ ಆರೋಪಿಸಿದೆ.

ಕೇಂದ್ರ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಐಎಂಎ ಹಗರಣದಲ್ಲಿ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಮನ್ಸೂರ್ ಖಾನ್, ಇತರ ನಿರ್ದೇಶಕರು, ಹಲವಾರು ಖಾಸಗಿ ವ್ಯಕ್ತಿಗಳು, ಕೆಲವು ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ 33 ಆರೋಪಿಗಳ ವಿರುದ್ಧ ಮೂರು ಚಾರ್ಜ್‌ಶೀಟ್‌ಗಳು ಮತ್ತು ಮೂರು ಪೂರಕ ಚಾರ್ಜ್‌ಶೀಟ್‌ಗಳನ್ನು ದಾಖಲಿಸಿದೆ.

"ಐಎಂಎ ಅನಧಿಕೃತ ಠೇವಣಿಗಳನ್ನು ಸಂಗ್ರಹಿಸಿದೆ ಮತ್ತು ಅಸಲು ಮತ್ತು ಭರವಸೆಯ ಆದಾಯವನ್ನು ಮರುಪಾವತಿಸಲು ವಿಫಲವಾದ ಮೂಲಕ ಸಾರ್ವಜನಿಕರಿಗೆ ಮೋಸ ಮಾಡಿದೆ. ಈ ಹಣವನ್ನು ಆಸ್ತಿ ಸಂಪಾದಿಸಲು, ಕೆಲವು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಲು ಬಳಸಲಾಗಿದೆ. 2004ರ ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಇನ್ ಡಿಪಾಸಿಟರ್ಸ್ ಇನ್ ಫೈನಾನ್ಷಿಯಲ್ ಎಸ್ಟಾಬ್ಲಿಷ್ಮೆಂಟ್ಸ್ (ಕೆಪಿಐಡಿಎಫ್ಇ) ಕಾಯ್ದೆಯಡಿ ಹಲವಾರು ಐಎಂಎ ಆಸ್ತಿಗಳನ್ನು ಗುರುತಿಸಲಾಗಿದೆ ಮತ್ತು ಲಗತ್ತಿಸಲಾಗಿದೆ ಎಂದು ಸಿಬಿಐ ಸೇರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com