ವೆಂಟಿಲೇಟರ್ ಇದ್ದರೂ ಬಳಕೆ ಮಾಡಿಲ್ಲ, ಆಕ್ಸಿಜನ್ ಕೊರತೆಯಿಂದ 4 ಮಂದಿ ಸಾವು; ಜಿಲ್ಲಾಸ್ಪತ್ರೆ ಅಧಿಕಾರಿಗಳ ಅಮಾನತು!

ಆಕ್ಸಿಜನ್ ಸಮಸ್ಯೆಯಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ 4 ಮಂದಿ ಸೋಂಕಿತರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜಿಲ್ಲಾ ಶಸ್ತ್ರಚಿಕಿತ್ಸಕ, ಆರ್.ಎಂ.ಒ ರನ್ನು ಸಸ್ಪೆಂಡ್ ಮಾಡಿದ್ದಾರೆ.
ಸಚಿವ ಸುಧಾಕರ್
ಸಚಿವ ಸುಧಾಕರ್

ಕೋಲಾರ: ಆಕ್ಸಿಜನ್ ಸಮಸ್ಯೆಯಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ 4 ಮಂದಿ ಸೋಂಕಿತರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜಿಲ್ಲಾ ಶಸ್ತ್ರಚಿಕಿತ್ಸಕ, ಆರ್.ಎಂ.ಒ ರನ್ನು ಸಸ್ಪೆಂಡ್ ಮಾಡಿದ್ದಾರೆ.

ಘಟನೆ ಬಳಿಕ ಕೋಲಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಸುಧಾಕರ್ ಅವರು, ಆಸ್ಪತ್ರೆಯಲ್ಲಿ 40 ವೆಂಟಿಲೇಟರ್ ಇದ್ರೂ ಬಳಸ್ತಿಲ್ಲ, ಇದು ದೊಡ್ಡ ಅಪರಾಧ. ವೆಂಟಿಲೇಟರ್ ಬಳಸಿದ್ರೆ ಕನಿಷ್ಠ 40 ಜನರನ್ನ ಉಳಿಸಬಹುದಿತ್ತು. ಆಸ್ಪತ್ರೆಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಆಸ್ಪತ್ರೆಯಲ್ಲಿ ಪ್ರತಿನಿತ್ಯ 10 ರಿಂದ 11  ಜನರು ಸಾಯುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಅಟೆಂಡರ್ ಇಟ್ಟಿದ್ದಾರೆ. ರೋಗಿಗಳಿಗೆ ಅಟೆಂಡರ್ ರಾಜ್ಯದಲ್ಲಿ ಎಲ್ಲೂ ಇಲ್ಲ, ಇದು ತಪ್ಪು. ಕೊರೊನಾ ನಿರ್ವಹಣೆಗೆ ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಅಂತೆಯೇ ನಿನ್ನೆ ನಡೆದ ಆಕ್ಸಿಜನ್ ಸರಬರಾಜಲ್ಲಿ ಆದ ದೋಷ ಕುರಿತು ತನಿಖೆ ನಡೆಸಲು ಸೂಚನೆ ನೀಡಿದ್ದೇನೆ. ಅಲ್ಲದೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳಿಂದ ನಿರ್ವಹಣೆ ಮಾಡುತ್ತಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಆರ್.ಎಂ.ಓ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.

ಇನ್ನು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ತಡರಾತ್ರಿವರೆಗೂ ಅಧಿಕಾರಿಗಳ ಜೊತೆ ಸುಧಾಕರ್ ಸಭೆ ನಡೆಸಿದ್ದು, ಸಭೆಯಲ್ಲಿ ಡಿಸಿ, ಎಸ್ ಪಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಸುಧಾಕರ್ ಅವರು, ಆಮ್ಲಜನಕದ ಕೊರತೆ ಅಥವಾ ಔಷಧಿಗಳ ಪೂರೈಕೆಯ ಬಗ್ಗೆ ಯಾವುದೇ  ಸಮಸ್ಯೆಗಳಿದ್ದರೂ ಯಾವುದೇ ಸಮಯದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಸಚಿವರು ಜಿಲ್ಲಾಡಳಿತಕ್ಕೆ ಸೂಚಿಸಿದರು. ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚಿನ ಖಾಸಗಿ ಆಸ್ಪತ್ರೆಗಳನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಅವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು. 

ಏನಿದು ಘಟನೆ?
ಏಪ್ರಿಲ್ 26ರ ರಾತ್ರಿ ಅಂದರೆ ನಿನ್ನೆ ಆಕ್ಸಿಜನ್ ಸಮಸ್ಯೆಯಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ನಾಲ್ವರು ಮೃತಪಟ್ಟಿದ್ದರು. ಬಳಿಕ ಸಾವಿನ ಸಂಖ್ಯೆ ಏರಿಕೆಯಾಗಿತ್ತು. ಕೊರೊನಾ ದೃಢವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತರು ಐಸಿಯು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಆದರೆ ನಿನ್ನೆ ರಾತ್ರಿ ಆಕ್ಸಿಜನ್ ಕೊರತೆಯಿಂದಾಗಿ ಮೂವರು ಪುರುಷರು ಹಾಗೂ ಓರ್ವ ಮಹಿಳೆ ಮೃತಪಟ್ಟಿದ್ದರು. ರಾತ್ರಿ ಫೋನ್ ಮಾಡಿದರು ಯಾವೊಬ್ಬ ಅಧಿಕಾರಿಯು ಸ್ಪಂದಿಸಿಲ್ಲ. ಆಸ್ಪತ್ರೆ ಸಿಬ್ಬಂದಿ ಆಕ್ಸಿಜನ್ ಕಡಿತಗೊಳಿಸಿದ್ದರಿಂದಲೇ ನಮ್ಮವರ ಸಾವು ಸಂಭವಿಸಿದೆ ಎಂದು ಆಸ್ಪತ್ರೆ ಎದುರು ಮೃತರ  ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com