ಬೆಂಗಳೂರು: ಸೋಂಕಿತರಿಗೆ ಐಸಿಯು ಬೆಡ್ ಕೊಡಿಸುವುದಾಗಿ ವಂಚಿಸುತ್ತಿದ್ದವನ ಬಂಧನ

ಕೋವಿಡ್ -19 ಸೋಂಕಿತರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಐಸಿಯು ಬೆಡ್‌ ಕೊಡಿಸುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ  ಆರೋಪಿ ಓರ್ವನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ -19 ಸೋಂಕಿತರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಐಸಿಯು ಬೆಡ್‌ ಕೊಡಿಸುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ  ಆರೋಪಿ ಓರ್ವನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ  ಮನೀಶ್ ಬಂಧಿತ ಆರೋಪಿ.ಬಂಧಿತ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದು, ಮಲ್ಲೇಶ್ವರಂನಲ್ಲಿ ನೆಲೆಸಿದ್ದನು.ಇಲ್ಲಿ ಹೌಸ್ ಕೀಪಿಂಗ್ ಏಜೆನ್ಸಿ  ಆರಂಭಿಸಿದ್ದನು.ಐಸಿಯು ಬೆಡ್‌ ಕೊಡಿಸುವುದಾಗಿ ಹೇಳಿ  ಹಣ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಯೊಬ್ಬರು ಆತ ವಿರುದ್ಧ ದೂರು ನೀಡಿದ್ದರು.ದೂರಿನ್ವಯ ಆತನನ್ನು ಬಂಧಿಸಲಾಗಿದ್ದು, ಸದ್ಯ ಆತನನ್ನು ನ್ಯಾಯಾಂಗ ಬಂಧನದಲ್ಲಿ  ಇರಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.

ಬಂಧಿತ ಆರೋಪಿ ಕೊರೊನಾ ಸೋಂಕಿತರಿಗೆ ಐಸಿಯು ಬೆಡ್‌ ನೀಡಲಾಗುವುದು ಹೇಳಿ ತನ್ನ ಮೊಬೈಲ್‌ ಸಂಖ್ಯೆ ಸಹಿತ ಸಂದೇಶ ಹರಿಬಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಂದೇಶ ನಂಬಿದ್ದ ದೂರುದಾರ, ತಮ್ಮ ತಾಯಿಗೆ ಬೆಡ್‌ ಕೊಡಿಸುವಂತೆ ಕೋರಿ ಆರೋಪಿಯನ್ನು ಸಂಪರ್ಕಿಸಿದ್ದರು. 

ಈ ವೇಳೆ ಬೆಡ್‌ ಕೊಡಿಸಲು ಹಣ ಖರ್ಚಾಗುತ್ತದೆ ಎಂದು ನಂಬಿಸಿ ದೂರುದಾರರಿಂದ ಗೂಗಲ್ ಪೇ  ಮೂಲಕ 20,000 ರೂ. ಪಡೆದುಕೊಂಡಿದ್ದನು. ನಂತರ, ದೂರುದಾರರ ಮೊಬೈಲ್ ಸಂಖ್ಯೆ  ಬ್ಲಾಕ್‌ ಮಾಡಿ ನಾಪತ್ತೆಯಾಗಿದ್ದನು ಎಂದು ಅವರು ತಿಳಿಸಿದ್ದಾರೆ.

ದೂರುದಾರರ ತಂದೆ–ತಾಯಿ ಇಬ್ಬರಿಗೂ ಕೊರೊನಾ ಸೋಂಕು ತಗುಲಿತ್ತು. ತಾಯಿ ಆರೋಗ್ಯ  ಕ್ಲಿಷ್ಟಕರವಾಗಿದ್ದ ಪರಿಣಾಮ ಅವರಿಗಾಗಿ ಐಸಿಯು ಬೆಡ್‌ ಹುಡುಕುತ್ತಿದ್ದರು. ಆದರೆ, ಏ. 24ರಂದು  ತಾಯಿ ತೀರಿಕೊಂಡಿದ್ದಾರೆ. ನಂತರ ಮರುದಿನ ಅವರ ತಂದೆ ಸಹ ಮೃತಪಟ್ಟಿದ್ದರು. ಅವರಿಬ್ಬರ  ಅಂತ್ಯಕ್ರಿಯೆ ಪೂರ್ಣಗೊಳಿಸಿದ ಬಳಿಕವೇ ದೂರುದಾರ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ
ಎಂದು ಅವರು ಮಾಹಿತಿ ನೀಡಿದರು.

ಬೆಡ್‌ ಹಂಚಿಕೆ ಪ್ರಕ್ರಿಯೆ ಸಾಫ್ಟ್‌ವೇರ್‌ ಮೂಲಕ ನಡೆಯುತ್ತಿದ್ದು, ಯಾವುದೇ ಹಣ ನೀಡಬೇಕಾಗಿಲ್ಲ. ಐಸಿಯು ಬೆಡ್‌, ಆಕ್ಸಿಜನ್ ಸೇರಿ ಇತರೆ ಯಾವುದೇ ರೀತಿಯ ಸೇವೆ ಹೆಸರಿನಲ್ಲಿ ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೆ ವಂಚನೆಗೆ ಒಳಗಾಗದೇ ಕೂಡಲೇ
 ಪೊಲೀಸ್‌ ಠಾಣೆಗೆ ಬಂದು ಮಾಹಿತಿ ನೀಡಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ  ಮಾಡಿದ್ದಾರೆ‌.                

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com