ಭಾರತಕ್ಕೆ 5 ಲಕ್ಷ ಐಸಿಯು ಹಾಸಿಗೆಗಳು ಬೇಕಾಗುತ್ತವೆ; 3ನೇ ಅಲೆಗೂ ಸಿದ್ಧರಾಗಿ: ಡಾ. ದೇವಿ ಶೆಟ್ಟಿ

ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂಬ ಮುನ್ಸೂಚನೆ ನೀಡಿದ ಖ್ಯಾತ ಶಸ್ತ್ರಚಿಕಿತ್ಸಕ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ಮುಂದಿನ ಕೆಲವು ವಾರಗಳಲ್ಲಿ ಭಾರತಕ್ಕೆ ಹೆಚ್ಚುವರಿ 5 ಲಕ್ಷ ಐಸಿಯು ಹಾಸಿಗೆಗಳು, 2 ಲಕ್ಷ ದಾದಿಯರು ಮತ್ತು 1.5 ಲಕ್ಷ ವೈದ್ಯರ ಅಗತ್ಯವಿದೆ ಎಂದು ಹೇಳಿದ್ದಾರೆ.
ಡಾ ದೇವಿಶೆಟ್ಟಿ
ಡಾ ದೇವಿಶೆಟ್ಟಿ

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂಬ ಮುನ್ಸೂಚನೆ ನೀಡಿದ ಖ್ಯಾತ ಶಸ್ತ್ರಚಿಕಿತ್ಸಕ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ಮುಂದಿನ ಕೆಲವು ವಾರಗಳಲ್ಲಿ ಭಾರತಕ್ಕೆ ಹೆಚ್ಚುವರಿ 5 ಲಕ್ಷ ಐಸಿಯು ಹಾಸಿಗೆಗಳು, 2 ಲಕ್ಷ ದಾದಿಯರು ಮತ್ತು 1.5 ಲಕ್ಷ ವೈದ್ಯರ ಅಗತ್ಯವಿದೆ ಎಂದು ಹೇಳಿದ್ದಾರೆ.

ಭೀಕರ ಪರಿಸ್ಥಿತಿಯನ್ನು ಎದುರಿಸಲು ಆಮೂಲಾಗ್ರ ಪರಿಹಾರಗಳನ್ನು ಸಹ ಸೂಚಿಸಿದ್ದಾರೆ. ಪ್ರಸ್ತುತ, ಭಾರತವು ಕೇವಲ 75,000 ರಿಂದ 90,000 ಐಸಿಯು ಹಾಸಿಗೆಗಳು ಮಾತ್ರ ಇವೆ. ಅದಾಗಲೇ ಬಹುತೇಕ ಎಲ್ಲಾ ಬೆಡ್ ಗಳು ಫುಲ್ ಆಗಿವೆ. ಇನ್ನು ಎರಡನೇ ಅಲೆ ಮಧ್ಯದ ಸ್ಥಿತಿಯಲ್ಲಿದ್ದು ಅದು ಉತ್ತುಂಗಕ್ಕೇರಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ ಎಂದರು.

ಪ್ರಸ್ತುತ ಭಾರತದಲ್ಲಿ ದಿನಕ್ಕೆ ಸುಮಾರು 3.5 ಲಕ್ಷ ಪ್ರಕರಣಗಳನ್ನು ವರದಿಯಾಗುತ್ತಿವೆ. ಕೆಲವು ತಜ್ಞರು ಹೇಳುವಂತೆ ಈ ಸಂಖ್ಯೆ ಪ್ರತಿದಿನ ಗರಿಷ್ಠ 5 ಲಕ್ಷಕ್ಕೆ ಏರಬಹುದು. ಇನ್ನು ಮಾಧ್ಯಮಗಳಲ್ಲಿ ಐಸಿಯುಗಳಲ್ಲಿನ ರೋಗಿಗಳು ಆಮ್ಲಜನಕದ ಕೊರತೆಯಿಂದಾಗಿ ಸಾಯುತ್ತಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದೆಡೆ ರೋಗಿಗಳನ್ನು ನೋಡಿಕೊಳ್ಳಲು ದಾದಿಯರು ಮತ್ತು ವೈದ್ಯರು ನಿರ್ದಿಷ್ಠ ಸಂಖ್ಯೆಯಲ್ಲಿಲ್ಲ ಎಂದರು.

ನಾರಾಯಣ ಹೆಲ್ತ್‌ನ ಅಧ್ಯಕ್ಷ ಮತ್ತು ಸಂಸ್ಥಾಪಕ ಡಾ.ಶೆಟ್ಟಿ ಅವರು ಪುಣೆಯ ಸಿಂಬಯೋಸಿಸ್ ಗೋಲ್ಡನ್ ಜುಬಿಲಿ ಉಪನ್ಯಾಸ ಸರಣಿಯಲ್ಲಿ ತಮ್ಮ ಆನ್‌ಲೈನ್ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ. ಕೋವಿಡ್ ಪಾಸಿಟಿವ್ ಬಂದ ಪ್ರತಿ ರೋಗಿಯ ಮನೆಯಲ್ಲಿ ಕನಿಷ್ಠ 5 ರಿಂದ 10 ಜನರಿರುತ್ತಾರೆ. ಆದರೆ ಅವರು ಪರೀಕ್ಷೆಗೆ ಒಳಗಾಗುವುದಿಲ್ಲ. ಇದನ್ನು ಲೆಕ್ಕಾಚಾರ ಮಾಡಿದರೆ ಭಾರತದಲ್ಲಿ ಈಗಲೂ ಪ್ರತಿದಿನ 15 ರಿಂದ 20 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದರು. 

ಸೋಂಕಿಗೆ ಒಳಗಾದವರ ಪೈಕಿ ಹಲವರಿಗೆ ಐಸಿಯು ಹಾಸಿಗೆಯ ಅಗತ್ಯವಿರುತ್ತದೆ. ಸರಾಸರಿ, ಐಸಿಯುನಲ್ಲಿ ರೋಗಿಯು ಕನಿಷ್ಠ 10 ದಿನಗಳ ಕಾಲ ಚಿಕಿತ್ಸೆ ಪಡೆಯಬೇಕಾಗುತ್ತದೆ. ಆದ್ದರಿಂದ ಸನ್ನಿವೇಶ ಏನು ಎಂದು ನೀವು ಊಹಿಸಬಹುದು. ನಾವು ಏನು ಮಾಡಬೇಕೆಂದು ತಿಳಿಯಿರಿ? ಮುಂದಿನ ಕೆಲವು ವಾರಗಳಲ್ಲಿ ನಾವು ಕನಿಷ್ಠ ಐದು ಲಕ್ಷ ಹೆಚ್ಚುವರಿ ಐಸಿಯು ಹಾಸಿಗೆಗಳನ್ನು ಸೃಷ್ಟಿಸಬೇಕಾಗಿದೆ ಎಂದು ಅವರು ಹೇಳಿದರು.

"ದುರದೃಷ್ಟವಶಾತ್, ಐಸಿಯುಗಳಿದ್ದರೆ ಸಾಲದು. ರೋಗಿಗಳಿಗೆ ಚಿಕಿತ್ಸೆ ನೀಡಲು ದಾದಿಯರು, ವೈದ್ಯರು ಮತ್ತು ಅರೆವೈದ್ಯರು ಇರಬೇಕಾಗುತ್ತದೆ. ಐಸಿಯುಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆ ಹೆಚ್ಚಾಗಿ ದಾದಿಯರ ಮೇಲೆ ಅವಲಂಬಿತವಾಗಿರುತ್ತದೆ. ಸಾಂಕ್ರಾಮಿಕ ರೋಗ ಪ್ರಾರಂಭವಾಗುವ ಮೊದಲೇ ಸರ್ಕಾರಿ ಆಸ್ಪತ್ರೆಗಳು ದೇಶಾದ್ಯಂತ ಶೇಕಡಾ 78ರಷ್ಟು ವೈದ್ಯಕೀಯ ತಜ್ಞರ ಕೊರತೆ ಇತ್ತು. ಈಗ, ಮುಂದಿನ ಕೆಲವು ವಾರಗಳಲ್ಲಿ ನಾವು ಕನಿಷ್ಠ ಎರಡು ಲಕ್ಷ ದಾದಿಯರು ಮತ್ತು ಕನಿಷ್ಠ ಒಂದೂವರೆ ಲಕ್ಷ ವೈದ್ಯರನ್ನು ಉತ್ಪಾದಿಸಬೇಕಾಗಿದೆ ಎಂದರು. 

ಮುಂದಿನ ಒಂದು ವರ್ಷದವರೆಗೆ ಕೋವಿಡ್ ಅನ್ನು ನಿರ್ವಹಿಸಲು ಇವರೆಲ್ಲಾ ಮೀಸಲಾಗಿರಬೇಕು. ಏಕೆಂದರೆ ಪ್ರಸ್ತುತ ಸಾಂಕ್ರಾಮಿಕ ರೋಗವು ಸುಮಾರು 4 ರಿಂದ 5 ತಿಂಗಳು ಇರಲಿದ್ದು, ತದನಂತರ ನಾವು ಮೂರನೇ ಅಲೆಗೂ ಸಿದ್ಧರಾಗಿರಬೇಕು ಎಂದು ದೇವಿ ಶೆಟ್ಟಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com