ನಗರಗಳಿಂದ ವಾಪಸ್ಸಾಗುತ್ತಿರುವ ಜನ: ಸಕ್ಕರೆ ನಾಡು ಮಂಡ್ಯದಲ್ಲಿ ಹೆಚ್ಚಿದ ಕೊರೋನಾ ಆತಂಕ!

ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಜಿಲ್ಲೆಯು ಇದೀಗ ಕೊರೋನಾ ಕ್ಲಸ್ಟರ್ ಆಗಿ ಮಾರ್ಪಟ್ಟಿದೆ.
ಹೊಳಗೆರೆ ದೇವರಾಜಹಳ್ಳಿಯಲ್ಲಿ ನಿಂತಿರುವ ಗ್ರಾಮಸ್ಥರು ಹಾಗೂ ಪೊಲೀಸರು
ಹೊಳಗೆರೆ ದೇವರಾಜಹಳ್ಳಿಯಲ್ಲಿ ನಿಂತಿರುವ ಗ್ರಾಮಸ್ಥರು ಹಾಗೂ ಪೊಲೀಸರು

ಮೈಸೂರು: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಜಿಲ್ಲೆಯು ಇದೀಗ ಕೊರೋನಾ ಕ್ಲಸ್ಟರ್ ಆಗಿ ಮಾರ್ಪಟ್ಟಿದೆ. ಜಿಲ್ಲೆಯಲ್ಲಿರುವ ಪ್ರತೀ ಗ್ರಾಮದಲ್ಲಿಯೂ ಕೊರೋನಾ ವೈರಸ್ ಸೋಂಕು ಕಂಡು ಬಂದಿದ್ದು, ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಮಂಡಳಿಯ ಅಧಿಕಾರಿಗಳು ಕೆಲವು ಗ್ರಾಮಗಳನ್ನು ಸೀಲ್ಡೌನ್ ಮಾಡುತ್ತಿದ್ದಾರೆ. 

ಮಹಾರಾಷ್ಟ್ರದ ವಲಸೆ ಕಾರ್ಮಿಕರು ಹಾಗೂ ರಾಜ್ಯದ ಇತರೆ ಪ್ರದೇಶಗಳಿಗೆ ತೆರಳಿರುವ ಜನರು ಜಿಲ್ಲೆಗೆ ವಾಪಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ನಾಗಮಂಗಲ, ಮದ್ದೂರು, ಪಾಂಡವಪುರ, ಮಳವಳ್ಳಿ, ಕೆ.ಆರ್.ಪೇಟೆ ಹಾಗೂ ಶ್ರೀರಂಗಪಟ್ಟಣದಲ್ಲಿ ಸೋಂಕು ಸಮುದಾಯ ಹಂತ ತಲುಪಿದೆ ಎಂದು ತಿಳಿದುಬಂದಿದೆ. 

ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಬರೋಬ್ಬರಿ 737 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 4,448 ಸಕ್ರಿಯ ಪ್ರಕರಣಗಳಿವೆ. ಈ ವರೆಗೂ 193 ಮಂದಿ ಸೋಂಕಿನಿಂದ ಬಲಿಯಾಗಿದ್ದಾರೆಂದು ವರದಿಗಳು ತಿಳಿಸಿವೆ. 

ಮೈಸೂರು, ಬೆಂಗಳೂರು, ಹಾಗೂ ಇತರೆ ನಗರಗಳಿಂದ ಸಂಬಂಧಿಕರು, ಸ್ನೇಹಿತರನ್ನು ಭೇಟಿ ಮಾಡಲು ಜಿಲ್ಲೆಗೆ ಜನರು ಬರುತ್ತಿದ್ದಾರೆ. ಯುಗಾದಿ, ಜಾತ್ರೆ ಹಾಗೂ ಇನ್ನಿತರೆ ಸಂದರ್ಭದಲ್ಲಿ ಹೆಚ್ಚೆಚ್ಚು ಜನರು ಜಿಲ್ಲೆಗೆ ಆಗಮಿಸಿದ್ದರಿಂದ ಸೋಂಕು ಹೆಚ್ಚಾಗಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. 

ನಮ್ಮ ಗ್ರಾಮದಲ್ಲಿ 15 ಪ್ರಕರಣಗಳು ಪತ್ತೆಯಾಗಿವೆ. ಕೆರಗೋಡು, ದುಡ್ಡಾ, ಹೋಬಳಿಯಲ್ಲಿಯೂ ಇದೇ ರೀತಿ ಹಲವು ಪ್ರಕರಣಗಳು ಪತ್ತೆಯಾಗಿವೆ. ಇತರೆ ನಗರಗಳಿಗೆ ತೆರಳುವ ಜನರು ಸ್ನೇಹಿತರೊಂದಿಗೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ವೇಳೆ ವೈರಸ್'ನ್ನೂ ಹೊತ್ತು ತರುತ್ತಿದ್ದಾರೆ. ಇಂತಹವರು ಸಾಮಾಜಿಕ ಅಂತರ, ಹಾಗೂ ಸರ್ಕಾರ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ಮಂಡ್ಯ ಜಿಲ್ಲೆಯ ನಿವಾಸಿಯೊಬ್ಬರು ಹೇಳಿದ್ದಾರೆ. 

ಈ ನಡುವೆ ಪಾಂಡವಪುರ ತಾಲೂಕಿನ ಹೊಳಗೆರೆ ದೇವರಾಜಹಳ್ಳಿಯಲ್ಲಿ 40 ಸೋಂಕು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಹಬ್ಬಕ್ಕೆಂದು ಗ್ರಾಮಕ್ಕೆ ಬೆಂಗಳೂರಿನಿಂದ ಜನರು ಬಂದಿದ್ದರು. ಅವರಿಂದಲೇ ಸೋಂಕು ಹರಡಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. 

ಜಿಲ್ಲಾ ಆರೋಗ್ಯಾಧಿಕಾರಿ ಮಂಚೇಗೌಡ ಅವರು ಮಾತನಾಡಿ, ಜಿಲ್ಲಾಯಲ್ಲಿ ಕೊರೋನಾ ಸಮುದಾಯ ಹಂತ ತಲುಪಿಸುವುದು ಸಾಕಷ್ಟು ಆತಂಕವನ್ನು ಸೃಷ್ಟಿಸಿದೆ. ಹೀಗಾಗಿ ಕೊರೋನಾ ನಿಯಮಗಳನ್ನು ಪಾಲನೆ ಮಾಡುವಂತೆ ಜನರಲ್ಲಿ ಅರಿವು ಮೂಡಿಸಲು ಅಂಗನವಾಡಿ, ಆರೋಗ್ಯ ಸಿಬ್ಬಂದಿಗಳು ಮತ್ತು ಆರೋಗ್ಯ ಕಾರ್ಯಕರ್ತರನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com