ಡಿಜಿಪಿ ಆಗಿ ಕಮಲ್ ಪಂತ್ ಗೆ ಬಡ್ತಿ, ಕಮಿಷನರ್ ಆಗಿ ಮುಂದುವರಿಕೆ

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಕಮಲ್ ಪಂತ್
ಕಮಲ್ ಪಂತ್

ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. 

ಎಡಿಜಿಪಿ ಹುದ್ದೆಯಿಂದ ಡಿಜಿಪಿ ಹುದ್ದೆಗೆ ಕಮಲ್ ಪಂತ್ ಅವರಿಗೆ ಮುಂಬಡ್ತಿ ನೀಡಲಾಗಿದೆ. ಬೆಂಗಳೂರು ಆಯುಕ್ತ ಹುದ್ದೆಯನ್ನು ಡಿಜಿಪಿ ಹುದ್ದೆಗೆ ಉನ್ನತೀಕರಿಸಿ ಅದೇ ಹುದ್ದೆಯಲ್ಲಿ ಕಮಲ್ ಪಂತ್ ಅವರನ್ನು ಸರ್ಕಾರ ಮುಂದುವರೆಸಿದೆ. 

ಇದರೊಂದಿಗೆ ಎರಡನೇ ಬಾರಿಗೆ ಬೆಂಗಳೂರು ಆಯುಕ್ತ ಹುದ್ದೆ ಡಿಜಿಪಿ ಸ್ಥಾನ ಪಡೆದುಕೊಂಡಂತಾಗಿದೆ. ಈ ಮೊದಲು ನಿವೃತ್ತ ಐಪಿಎಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಅವರು ಬೆಂಗಳೂರು ನಗರ ಆಯುಕ್ತರಾಗಿದ್ದಾಗ ಡಿಜಿಪಿ ಹುದ್ದೆಗೆ ಮುಂಬಡ್ತಿ ಪಡೆದು ಎರಡೂವರೆ ತಿಂಗಳು ಕಾರ್ಯನಿರ್ವಹಿಸಿದ್ದರು. 

15 ವರ್ಷಗಳ ಬಳಿಕ ಮತ್ತೆ ಆಯುಕ್ತ ಹುದ್ದೆಯನ್ನು ಡಿಜಿಪಿ ಸ್ಥಾನಮಾನಕ್ಕೆ ಉನ್ನತೀಕರಿಸಲಾಗಿದೆ. ಕೊರೋನಾ ಸೋಂಕಿನ ಎರಡನೇ ಅಲೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ಜಾರಿಯಲ್ಲಿರುವ ಕಾರಣಕ್ಕೆ ಬೆಂಗಳೂರು ಆಯುಕ್ತರ ಬದಲಾವಣೆಗೆ ಕೈ ಹಾಕದೆ ಮುಂಬಡ್ತಿಗೆ ಮಾತ್ರ ಸರ್ಕಾರ ಸೀಮಿತಗೊಳಿಸಿದೆ. ಕೊರೋನಾ ವಿಷಮ ಪರಿಸ್ಥಿತಿ ತಿಳಿಗೊಂಡ ಬಳಿಕ ಹೊಸ ಆಯುಕ್ತರ ನೇಮಕಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವ ಬೊಮ್ಮಾಯಿ ಒಲವು ತೋರಿದ್ದಾರೆನ್ನಲಾಗಿದೆ. 

ಇದೇ ವೇಳೆ ಐಜಿಪಿ ಆರ್.ಹಿತೇಂದ್ರ ಅವರಿಗೆ ಎಡಿಜಿಪಿ ಹುದ್ದೆಗೆ ಮುಂಬಡ್ತಿ ನೀಡಿ, ರಾಜ್ಯ ಅಪರಾಧ ದಳದ ಎಡಿಜಿಪಿ ಹುದ್ದೆಗೆ ಅವರನ್ನು ಸರ್ಕಾರ ನೇಮಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com