ರಾಜ್ಯಪಾಲರ ಹುದ್ದೆಗೆ ಲಂಚ ನೀಡಿರುವುದು ದುರಾದೃಷ್ಟಕರ: ಯುವರಾಜ್ ಸ್ವಾಮಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ರಾಜ್ಯಪಾಲ ಹುದ್ದೆ ಪಡೆಯಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರು ವಂಚಕ ಯುವರಾಜ್‌ ಸ್ವಾಮಿಗೆ ಲಂಚ ನೀಡಿದ್ದಾರೆಂಬ ವಿಷಯವು ನಿಜಕ್ಕೂ ದುರದೃಷ್ಟಕರ ಎಂದು ಹೈಕೋರ್ಟ್‌ ತೀವ್ರ ಬೇಸರ ವ್ಯಕ್ತಪಡಿಸಿದೆ. 
ಯುವರಾಜ್ ಸ್ವಾಮಿ
ಯುವರಾಜ್ ಸ್ವಾಮಿ

ಬೆಂಗಳೂರು: ರಾಜ್ಯಪಾಲ ಹುದ್ದೆ ಪಡೆಯಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರು ವಂಚಕ ಯುವರಾಜ್‌ ಸ್ವಾಮಿಗೆ ಲಂಚ ನೀಡಿದ್ದಾರೆಂಬ ವಿಷಯವು ನಿಜಕ್ಕೂ ದುರದೃಷ್ಟಕರ ಎಂದು ಹೈಕೋರ್ಟ್‌ ತೀವ್ರ ಬೇಸರ ವ್ಯಕ್ತಪಡಿಸಿದೆ. 

ಉದ್ಯಮಿ ಸುರೇಂದ್ರ ರೆಡ್ಡಿ ಎಂಬುವರಿಗೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನ ಕೊಡಿಸುವ ಆಮಿಷ ತೋರಿಸಿ ಒಂದು ಕೋಟಿ ರು. ಪಡೆದು ವಂಚನೆ ಎಸಗಿದ ಪ್ರಕರಣ ಸೇರಿ ಒಟ್ಟು ಆರು ವಂಚನೆ ಪ್ರಕರಣಗಳಲ್ಲಿ ಆರೋಪಿ ಯುವರಾಜ್‌ ಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ವೇಳೆ ನ್ಯಾ.ಕೆ. ನಟರಾಜನ್‌ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರ ಹುದ್ದೆಯನ್ನು ಪಡೆಯಲು ಓರ್ವ ಮಧ್ಯವರ್ತಿಗೆ ಲಂಚ ನೀಡುವುದು ನ್ಯಾಯಾಧೀಶರ ಮತ್ತು ರಾಜ್ಯಪಾಲರ ಹುದ್ದೆಯ ಮೇಲಿನ ಗೌರವವನ್ನು ಕುಂಠಿತಗೊಳಿಸಿದೆ ಎಂದು ಕರ್ನಾಟಕ ಹೈಕೋರ್ಟ್ ಖೇದ ವ್ಯಕ್ತಪಡಿಸಿದೆ. ರಾಜ್ಯಪಾಲ ಹುದ್ದೆ ಕೊಡಿಸುವುದಾಗಿ ನಿವೃತ್ತ ನ್ಯಾಯಾಧಿಶರಿಗೆ 8.50 ಕೋಟಿ ವಂಚನೆಗೈದ ಯುವರಾಜ್ ಸ್ವಾಮಿ ಪ್ರಕರಣದ
ವಿಚಾರಣೆಯನ್ನು ನಿನ್ನೆ ನಡೆಸಿದ ಕೋರ್ಟ್ ನ್ಯಾಯಾಧೀಶರು ಮತ್ತು ರಾಜ್ಯಪಾಲ ಹುದ್ದೆಯ ಗೌರವಕ್ಕೆ ಈ ಪ್ರಕರಣದಿಂದ ಭಂಗ ಬಂದಂತಾಗಿದೆ ಎಂದು ತಿಳಿಸಿದೆ.

8.8 ಕೋಟಿ ಹಣ ಪಡೆದು ವಂಚಿಸಿದ ಆರೋಪ ಕೇಂದ್ರದಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ನಿವೃತ್ತ ನ್ಯಾಯಾಧೀಶರ ಬಳಿ ಸುಮಾರು 8.8 ಕೋಟಿ ಹಣ ಪಡೆದು ಯುವರಾಜ್ ವಂಚಿಸಿದ್ದ ಎಂದು ನಿವೃತ್ತ ನ್ಯಾಯಾಧೀಶರು ಈ ಹಿಂದೆ ಹೇಳಿಕೆ ನೀಡಿದ್ದರು. ಯುವರಾಜ್ ಅಲಿಯಾಸ್ ಸ್ವಾಮಿ ವಂಚನೆಯ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. 

ಆನಂತರ ಸಿಸಿಬಿ ಪೊಲೀಸರು ಇದೀಗ ಈ ಎಫ್ಐಆರ್ ಆಧಾರದಲ್ಲಿ ಹೇಳಿಕೆ ಪಡೆದುಕೊಂಡಿದ್ದರು. ಪೊಲೀಸ್ ಆಧಿಕಾರಿಯೊಬ್ಬರ ಮೂಲಕ ಯುವರಾಜ್ ನನಗೆ ಪರಿಚಯವಾಗಿದ್ದು, ಬಿಜೆಪಿ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ಯುವರಾಜ್ ನನಗೆ ನಂಬಿಸಿದ್ದಾನೆ ಎಂದು ಆ ನಿವೃತ್ತ ನ್ಯಾಯಾಧೀಶರು ಸಿಸಿಬಿಗೆ ಹೇಳಿಕೆ ನೀಡಿದ್ದರು.

ಆರೋಪಿ ಯುವರಾಜ್ ಸ್ವಾಮಿ ಪರ ವಾದ ಮಂಡಿಸಿದ ಹಿರಿಯ ವಕೀಲ ಟೋನಿ ಸೆಬಾಸ್ಟಿಯನ್, ಆರೋಪಿಯ ಮೇಲೆ ಪೊಲೀಸರು ಇಲ್ಲಸಲ್ಲದ ಆರೋಪ ಹೋರಿಸಿದ್ದಾರೆ. ಆದರೆ  ಅವರ ವಾದಕ್ಕೆ ಮಣಿಯದ ಕೋರ್ಟ್, ಹೈಕೋರ್ಟ್​ನ ನಿವೃತ್ತ ನ್ಯಾಯಾಧೀಶರಂತಹ ಉನ್ನತ ಶಿಕ್ಷಣ ಪಡೆದವರನ್ನೇ ಆರೋಪಿ ವಂಚನೆ ಎಸಗಿದ್ದಾನೆ. ಇದು ಘೋರ ಅಪರಾಧವಾಗಿದೆ ಎಂದು ತಿಳಿಸಿತು. ಅಲ್ಲದೇ ಆರೋಪಿಯು ಪ್ರಭಾವಶಾಲಿ ವ್ಯಕ್ತಿಯಾಗಿದ್ದು ಜಾಮೀನು ನೀಡಿದರೆ ಪ್ರಕರಣದ ತನಿಖೆಯ ದಾರಿ ತಪ್ಪಿಸುವ ಸಾಧ್ಯತೆಯೂ ಇದೆ.
ಹೀಗಾಗಿ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ತಿಳಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com