ಕೋವಿಡ್-19: ಬೆಂಗಳೂರು ಪೂರ್ವ ವಲಯದಲ್ಲಿ ಹೆಚ್ಚೆಚ್ಚು ಹಾಸಿಗೆ, ಕೋವಿಡ್ ಕೇರ್ ಕೇಂದ್ರ ಸ್ಥಾಪನೆ- ಸಚಿವ ಸೋಮಣ್ಣ
ಬೆಂಗಳೂರು ಪೂರ್ವ ವಲಯದಲ್ಲಿ ಹೆಚ್ಚೆಚ್ಚು ಹಾಸಿಗೆಗಳ ಸ್ಥಾಪನೆ ಹಾಗೂ ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಸಚಿವ ಸೋಮಣ್ಣ ಅವರು ಹೇಳಿದ್ದಾರೆ.
Published: 30th April 2021 08:00 AM | Last Updated: 30th April 2021 01:02 PM | A+A A-

ಸಚಿವ ಸೋಮಣ್ಣ
ಬೆಂಗಳೂರು: ಬೆಂಗಳೂರು ಪೂರ್ವ ವಲಯದಲ್ಲಿ ಹೆಚ್ಚೆಚ್ಚು ಹಾಸಿಗೆಗಳ ಸ್ಥಾಪನೆ ಹಾಗೂ ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಸಚಿವ ಸೋಮಣ್ಣ ಅವರು ಹೇಳಿದ್ದಾರೆ.
ಬಿಬಿಎಂಪಿ ಪೂರ್ವ ವಲಯದ ಏಳು ಕ್ಷೇತ್ರಗಳ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸೋಮಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ 2-3 ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅಂಬೇಡ್ಕರ್ ಮೆಡಿಕಲ್ ಕಾಲೇಜನ್ನು ಸಂಪೂರ್ಣ ಕೋವಿಡ್ ಸೆಂಟರ್ ಮಾಡಲಿದ್ದೇವೆ. ಇಲ್ಲಿ 400 ಬೆಡ್ಗಳಿವೆ. 150 ಆಕ್ಸಿಜನ್ ಬೆಡ್ಗಳನ್ನ ಹಾಕುತ್ತಿದ್ದೇವೆ. ಪುಲಿಕೇಶಿ ಮತ್ತು ಸರ್ವಜ್ಞ ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲಾಗುವುದು. ಚರಕ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಹಾಕಲಾಗುವುದು. ಚರಕ ಆಸ್ಪತ್ರೆಯ ಪಕ್ಕದಲ್ಲಿರುವ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ 100 ಬೆಡ್ಗಳನ್ನ ನೀಡಲಾಗುವುದು. ಶಾಂತಿ ನಗರದಲ್ಲಿ 175 ಬೆಡ್ಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದು. ಸಿ.ವಿ. ರಾಮನ್ ನಗರದಲ್ಲಿ 100 ಬೆಡ್ ಹಾಗೂ ಇಂದಿರಾನಗರದಲ್ಲಿ 20-30 ಬೆಡ್ಗಳಿರುವ ಕೋವಿಡ್ ಕೇಂದ್ರಗಳನ್ನ ಆರಂಭಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಇಂದಿರಾನಗರ ಇಎಸ್ಐ ಆಸ್ಪತ್ರೆಯಲ್ಲಿ ಆಕ್ಸಿಜನ್ ವುಳ್ಳ 50 ಹಾಸಿಗೆಗಳನ್ನು ಸ್ಥಾಪನೆ ಮಾಡುವಂತೆ ಸೂಜಿಸಲಾಗಿದೆ. ವೆಂಟಿಲೇಟರ್, ಆಕ್ಸಿಜನ್ ಹಾಗೂ ರೆಮ್ಡೆಸಿವಿರ್ ಕುರಿತ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುತ್ತದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 20 ಜನರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತದೆ. ಗೋವಿಂದರಾಜನಗರದಲ್ಲಿ ಇಂದು ಸಂಜೆ ಆರಂಭಿಸುತ್ತೇವೆ. ಮೃತದೇಹ ಸಾಗಿಸಲು ವಾಹನ ವ್ಯವಸ್ಥೆ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಈ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.