ರಾಜ್ಯದ ಎಲ್ಲಾ ಸೈನಿಕ ಆಸ್ಪತ್ರೆಗಳನ್ನು ಕೋವಿಡ್‌ ಕೇರ್ ಕೇಂದ್ರಗಳಾಗಿ ಮಾರ್ಪಡಿಸಿ: ರಕ್ಷಣಾ ಸಚಿವರಿಗೆ ಜೋಶಿ ಮನವಿ

ರಾಜ್ಯದಲ್ಲಿರುವ ಎಲ್ಲಾ ಸೈನಿಕ ಆಸ್ಪತ್ರೆಗಳನ್ನು ತಾತ್ಕಾಲಿಕ ಕೋವಿಡ್‌ ಕೇರ್ ಕೇಂದ್ರಗಳಾಗಿ ಪರಿವರ್ತಿಸುವಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಮನವಿ ಮಾಡಿಕೊಂಡಿದ್ದಾರೆ. 
ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಹಲವು ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್‌ ಸಮಸ್ಯೆ ತಲೆದೂರಿದೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಎಲ್ಲಾ ಸೈನಿಕ ಆಸ್ಪತ್ರೆಗಳನ್ನು ತಾತ್ಕಾಲಿಕ ಕೋವಿಡ್‌ ಕೇರ್ ಕೇಂದ್ರಗಳಾಗಿ ಪರಿವರ್ತಿಸುವಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಮನವಿ ಮಾಡಿಕೊಂಡಿದ್ದಾರೆ. 

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿನ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ಬಹುತೇಕ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳು ಭರ್ತಿಯಾಗಿದ್ದು, ಹಾಸಿಗೆಗಳು ಲಭ್ಯವಿಲ್ಲದ ಕಾರಣ ಪರಿಸ್ಥಿತಿ ಬಿಗಡಾಯಿಸುತ್ತಿದೆ. ರಾಜ್ಯದಲ್ಲಿ ಪ್ರತೀನಿತ್ಯ 35,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು, ಬೆಂಗಳೂರು ನಗರವೊಂದರಲ್ಲಿಯೇ 20,000ಕ್ಕೂ ಹೆಚ್ಚು ವರದಿಯಾಗುತ್ತಿವೆ. ಸಕ್ರಿಯ ಪ್ರಕರಣಗಳು 2.2 ಲಕ್ಷಕ್ಕಿಂತಲೂ ಹೆಚ್ಚಾಗಿದೆ. ಇತರೆ ಜಿಲ್ಲೆಗಳ ಪರಿಸ್ಥಿತಿ ಕೂಡ ಗಂಭೀರವಾಗಿದೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.22ಕ್ಕೆ ತಲುಪಿದೆ. ಎಲ್ಲಾ ಆಸ್ಪತ್ರೆಗಳೂ ರೋಗಿಗಳಿಂದ ಭರ್ತಿಯಾಗಿದೆ. ಹೀಗಾಗಿ ಪರಿಸ್ಥಿತಿ ನಿಭಾಯಿಸಲು ಬೆಂಗಳೂರಿನ ಕಮಾಂಡ್ ಆಸ್ಪತ್ರೆ, ಬೆಳಗಾವಿಯ ಸೇನಾ ಆಸ್ಪತ್ರೆ ಹಾಗೂ ಕಾರವಾರದ ಐಎನ್ಹೆಚ್ಎಸ್ ಆಸ್ಪತ್ರೆಯನ್ನು ಕೋವಿಡ್ ಕೇರ್ ಕೇಂದ್ರಗಳಾಗಿ ಮಾರ್ಪಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 

ಅಲ್ಲದೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ಇತರೆ ಮಿಲಿಟರಿ ಎಜನ್ಸಿಗಳಿಂದ ರಾಜ್ಯದಲ್ಲಿ ಅವಶ್ಯಕತೆ ಇರುವ ನಗರಗಳಲ್ಲಿ ಹೊಸ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com