ಕೇರಳ, ಮಹಾರಾಷ್ಟ್ರದಿಂದ ನಗರಕ್ಕೆ ಬರುವವರಿಗೆ ಆರ್'ಟಿ-ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ: ಬಿಬಿಎಂಪಿ
ಕೋವಿಡ್-19 ಸೋಂಕು ಹೆಚ್ಚಾಗಿರುವ ಕೇರಳ ಮತ್ತು ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬರುವವರಿಗೆ ತಕ್ಷಣದಿಂದ ಆರ್'ಟಿ-ಪಿಸಿಆರ್ ವರದಿ ಮತ್ತು ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಿದ್ದೇವೆಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.
Published: 03rd August 2021 08:36 AM | Last Updated: 03rd August 2021 08:36 AM | A+A A-

ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ವಾಹನಗಳ ಪರಿಶೀಲಿಸುತ್ತಿರುವ ಪೊಲೀಸರು
ಬೆಂಗಳೂರು: ಕೋವಿಡ್-19 ಸೋಂಕು ಹೆಚ್ಚಾಗಿರುವ ಕೇರಳ ಮತ್ತು ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬರುವವರಿಗೆ ತಕ್ಷಣದಿಂದ ಆರ್'ಟಿ-ಪಿಸಿಆರ್ ವರದಿ ಮತ್ತು ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಿದ್ದೇವೆಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.
ನಗರದಲ್ಲಿ ಕೋವಿಡ್ ನಿಯಂತ್ರಣ ನಿಯಮಗಳ ಅನುಷ್ಠಾನ ಸಂಬಂಧ ನಿನ್ನೆ ನಡೆದ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯ ಸಮನ್ವಯ ಸಮಿತಿ ಸಭೆ ಬಳಿಕ ಮಾತನಾಡಿರುವ ಗೌರವ್ ಗುಪ್ತಾ ಅವರು, ಕೋವಿಡ್-19 ಪರೀಕ್ಷೆ ವರದಿ ಇಲ್ಲದೆ ಬೆಂಗಲೂರಿಗೆ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿಯೇ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು. ನೆಗೆಟಿವ್ ವರದಿ ಕೈ ಸೇರುವವರೆಗೂ ಅವರು ಮನೆಯಲ್ಲಿಯೇ ಕ್ವಾರಂಟೈನ್ ಇರಬೇಕು. ಇಲ್ಲದಿದ್ದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕ್ವಾರಂಟೈನ್ ಮತ್ತು ಮೈಕ್ರೋ ಕಂಟೈನ್ಮೆಂಟ್ ಬಗ್ಗೆ ಈಗಾಗಲೇ ವಲಯವಾರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪಾಲಿಕೆಯೊಂದಿಗೆ ಪೊಲೀಸ್ ಇಲಾಖೆಯೂ ಕೈಜೋಡಿಸಿದ್ದು, ಯಾರಾದರೂ ಕೋವಿಡ್ ನಿಯಮ ಅಥವಾ ಕ್ವಾರಂಟೈನ್ ಕುರಿತು ನಿರ್ಲಕ್ಷ್ಯ ವಹಿಸಿದರೆ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ. ಜೊತೆಗೆ ಎಲ್ಲೆಡೆ ಪರೀಕ್ಷೆಗಳನ್ನೂ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ಮೂರನೇ ಅಲೆ ಆರಂಭವಾಗಿರುವ ಕುರಿತು ಆರೋಗ್ಯ ತಜ್ಞರು ದೃಢಪಡಿಸಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಎರಡನೇ ಅಲೆಯಲ್ಲಿ ಸಿದ್ಧತೆ ಮಾಡಿಕೊಂಡಿದ್ದ ಸರ್ಕಾರಿ ಆಸ್ಪತ್ರೆಗಳ ಹಾಸಿಗೆ ವ್ಯವಸ್ಥೆ, ಕೋವಿಡ್ ಆರೈಕೆ ಕೇಂದ್ರಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಸದ್ಯ ಪ್ರತಿ ದಿನ 500ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್ ನಿಯಮಗಳ ಕುರಿತು ಜನರಲ್ಲಿ ಜಾಗೃತಿ ಹೆಚ್ಚಾಗಬೇಕು. ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೊರೋನಾ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲನೆ ಮಾಡಬೇಕು. ಈ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕೆಂದು ಹೇಳಿದರು.
ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಮಾತನಾಡಿ, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ನಗರಕ್ಕೆ ರಸ್ತೆಗಳ ಮೂಲಕ ಆಗಮಿಸುವರನ್ನು ಗಡಿ ತಪಾಸಣಾ ಠಾಣೆಗಳ ಬಳಿ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಈ ರಾಜ್ಯಗಳ ಪ್ರಯಾಣಿಕರು 72 ಗಂಟೆಳ ಈಚೆಗೆ ಮಾಡಿಸಿರುವ ಆರ್‌ಟಿಪಿಸಿಆರ್ ಪರೀಕ್ಷಾ ವರದಿಯನ್ನು ಪರಿಶೀಲಿಸಲು ತಪಾಸಣಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ತಪಾಸಣಾ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಿದ್ದೇವೆಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ನಗರದಲ್ಲಿ ಕೋವಿಡ್ ನಿಯಂತ್ರಿಸಲು ಪೊಲೀಸ್ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು. ಕೊವಿಡ್ ನಿಯಮಗಳನ್ನು ಪಾಲಿಸದಿರುವವರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮಾತನಾಡಿ, ನಗರದಲ್ಲಿ ಕೋವಿಡ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪಾಲಿಕೆ ಹಾಗೂ ಪೊಲೀಸ್ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ಕೋವಿಡ್ ನಿಯಂತ್ರಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಆ ಬಳಿಕವೂ ನಿಯಮ ಪಾಲಿಸದಿದ್ದಲ್ಲಿ ದಂಡ ವಿಧಿಸಬೇಕು. ಅಗತ್ಯ ಬಿದ್ದರೆ, ಪ್ರಕರಣಗಳನ್ನು ದಾಖಲಿಸುವುದಕ್ಕೂ ಹಿಂದೇಟು ಹಾಕಬಾರದು ಎಂದರು.