ಕೋವಿಡ್-19: ಬೆಂಗಳೂರಿನಲ್ಲಿ ಸೆರೋ ಸರ್ವೆ ಆರಂಭ

ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬುಧವಾರ ನಗರದಲ್ಲಿ ಸೆರೋ ಸರ್ವೆ ಆರಂಭಿಸಿದೆ.
ಬೆಂಗಳೂರಿನಲ್ಲಿ ಸೆರೋ ಸಮೀಕ್ಷೆ
ಬೆಂಗಳೂರಿನಲ್ಲಿ ಸೆರೋ ಸಮೀಕ್ಷೆ

ಬೆಂಗಳೂರು: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬುಧವಾರ ನಗರದಲ್ಲಿ ಸೆರೋ ಸರ್ವೆ ಆರಂಭಿಸಿದೆ.

ಒಂದು ವಾರಗಳ ಕಾಲ ನಡೆಯಲಿರುವ ಈ ಸೆರೋ ಸರ್ವೆಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಚಾಲನೆ ನೀಡಿದರು. ಹಲಸೂರು ರೆಫರಲ್ ಆಸ್ಪತ್ರೆಯಿಂದ ಈ ಸೆರೋ ಸಮೀಕ್ಷೆಯನ್ನು ಆರಂಭಿಸಲಾಗಿದ್ದು, ಕೋವಿಡ್ ಕ್ಲಸ್ಟರ್‌ಗಳು ಹೆಚ್ಚುತ್ತಿರುವ ಪ್ರದೇಶಗಳಿಂದ ಮತ್ತು ಯಾವುದೇ ಕ್ಲಸ್ಟರ್ ಇಲ್ಲದ  ಪ್ರದೇಶಗಳಿಂದಲೂ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗುತ್ತದೆ. ಪ್ರತಿ ಬಿಬಿಎಂಪಿ ವಲಯದಲ್ಲಿ ಸಮೀಕ್ಷೆ ಮಾಡಬೇಕಾದ ಜನರ ಪಟ್ಟಿ ಸಿದ್ಧವಾಗಿದೆ ಎಂದು ಬಿಬಿಎಂಪಿ ಸಲಹಾ ಸಮಿತಿಯ ತಜ್ಞರು ತಿಳಿಸಿದ್ದಾರೆ.

ಬಿಬಿಎಂಪಿಯ ಪ್ರಕಾರ, 2,000 ಜನರನ್ನು ಈ ಸೆರೋ ಸಮೀಕ್ಷೆಗೆ ಒಳಪಡಿಸಲಾಗುತ್ತದೆ, ಅದರಲ್ಲಿ ಶೇಕಡಾ 30 ರಷ್ಟು ಜನರು 18 ವರ್ಷಕ್ಕಿಂತ ಕಡಿಮೆ, ಶೇ.50 ರಷ್ಟು ಜನರು 18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಶೇ.20 ರಷ್ಟು ಮಂದಿ 45 ವರ್ಷಕ್ಕಿಂತ ಮೇಲ್ಪಟ್ಟವರು ಇರಲಿದ್ದಾರೆ. ಜನರ ದೇಹದಲ್ಲಿ ಪ್ರತಿಕಾಯಗಳ  ಮಟ್ಟವನ್ನು ನಿರ್ಧರಿಸಲು 1,000 ಲಸಿಕೆ ಹಾಕಿದ ವ್ಯಕ್ತಿಗಳು ಮತ್ತು 1,000 ಲಸಿಕೆ ಹಾಕದ ವ್ಯಕ್ತಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ರಕ್ತದ ಸೀರಮ್ ಮತ್ತು ಗಂಟಲಿನ ಸ್ವ್ಯಾಬ್ ಮಾದರಿಗಳನ್ನು ಮನೆ-ಮನೆ ಸಮೀಕ್ಷೆಯ ಮೂಲಕ ಗುರುತಿಸಿದ ವ್ಯಕ್ತಿಗಳಿಂದ ಸಂಗ್ರಹಿಸಲಾಗುತ್ತದೆ.

ಸಮೀಕ್ಷೆಯನ್ನು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ತಂಡಗಳು ನಡೆಸುತ್ತವೆ. ವೈರಸ್ ಮತ್ತು ಅದರ ರೂಪಾಂತರಗಳು ಕುರಿತು ಸಾಂಕ್ರಾಮಿಕ ರೋಗಗಳ ತಜ್ಞರು ಮತ್ತು ವಲಯಗಳ ಆರೋಗ್ಯ ಅಧಿಕಾರಿಗಳಿಂದ ಸಮನ್ವಯಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯಸ್ಥರು ತಿಳಿಸಿದ್ದಾರೆ. 

ಈ ಸರ್ವೆ ಮೂಲಕ ಎಷ್ಟು ಜನರಿಗೆ ಸೋಂಕು ತಗುಲಿದೆ ಮತ್ತು ಎಷ್ಟು ಜನರಿಗೆ ವೈರಸ್ ವಿರುದ್ಧ ಹೋರಾಡಲು ಸಾಕಷ್ಟು ಪ್ರತಿಕಾಯಗಳಿವೆ ಎಂಬ ಕಲ್ಪನೆಯನ್ನು ನೀಡುತ್ತದೆ. ಸಮೀಕ್ಷೆಯ ವರದಿಯನ್ನು ಆಧರಿಸಿ, ವೈರಸ್ ಹರಡುವುದನ್ನು ನಿಯಂತ್ರಿಸಲು ಏನು ಮಾಡಬೇಕು ಮತ್ತು ಭವಿಷ್ಯದಲ್ಲಿ ಕೈಗೊಳ್ಳಬೇಕಾದ  ಕ್ರಮಗಳ ಕುರಿತು ಹೆಚ್ಚಿನ ನಿಯಮಗಳನ್ನು ರೂಪಿಸಲಾಗುವುದು ಎಂದು ಗೌರವ್ ಗುಪ್ತಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com