ಸಿಸಿಬಿ ಕಾರ್ಯಾಚರಣೆ: ಪಿಸ್ತೂಲ್ ಗನ್ ಮಾರಾಟ ಜಾಲ ಪತ್ತೆ, ಇಬ್ಬರು ರೌಡಿಗಳು ಸೇರಿ ನಾಲ್ವರು ಸೆರೆ

ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಜಾಲವನ್ನು ಸಿಸಿಬಿ ಪೊಲೀಸರು ಬೇದಿಸಿದ್ದು, ನಾಲ್ಕು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆಯಲಾದ ಕಂಟ್ರಿಮೇಡ್ ಪಿಸ್ತೂಲು
ವಶಕ್ಕೆ ಪಡೆಯಲಾದ ಕಂಟ್ರಿಮೇಡ್ ಪಿಸ್ತೂಲು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಜಾಲವನ್ನು ಸಿಸಿಬಿ ಪೊಲೀಸರು ಬೇದಿಸಿದ್ದು, ನಾಲ್ಕು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರಲ್ಲಿ ಇಬ್ಬರು ರೌಡಿಗಳೂ ಕೂಡ ಇದ್ದು, ಒಟ್ಟು ನಾಲ್ಕು ಮಂದಿಯನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು  ಕಲಾಸಿಪಾಳ್ಯದ ೧ನೇ ಕ್ರಾಸ್ ನ ಅಯಾಜುಲ್ಲಾ(30 ವರ್ಷ) ಗಂಗಾನಗರದ ಪಾಪಣ್ಣ ಗಾರ್ಡನ್ ನ ಸೈಯದ್ ಸಿರಾಜ್(42 ವರ್ಷ) ಹೆಗಡೆ ನಗರದ 8ನೇ ಕ್ರಾಸ್ ನ ಮಹಮದ್ ಅಲಿ(32) ಹಾಗೂ ರಾಜಾನುಕುಂಟೆಯ ದಿಬ್ಬೂರ್ ಗೇಟ್ ಬಳಿಯ ಅರುಣ್ ಕುಮಾರ್ ಅಲಿಯಾಸ್ ಲಾಂಗ್ ಅರುಣ (26 ವರ್ಷ)ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಲ್ಲಿ ಮಹಮದ್ ಅಲಿ ಶಿವಾಜಿನಗರದ ಠಾಣೆಯ ರೌಡಿಯಾಗಿದ್ದರೆ, ಲಾಂಗ್ ಅರುಣ ತುಮಕೂರು ಜಿಲ್ಲೆಯ ರೌಡಿ ಶೀಟರ್ ಆಗಿದ್ದಾನೆ. ಬಂಧಿತ ಆರೋಪಿಗಳಿಂದ ಎರಡು ಕಂಟ್ರಿಮೇಡ್ ಗನ್, ಮೂರು ಕಂಟ್ರಿಮೇಡ್ ಪಿಸ್ತೂಲ್, ಎರಡು ಕಂಟ್ರಿಮೇಡ್ ರೈಫಲ್‌ಗಳು ಹಾಗೂ ೧೯ ಜೀವಂತ ಗುಂಡುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಅಕ್ರಮಗಳಿಗೆ ಶಸ್ತ್ರಾಸ್ತ್ರ ಮಾರಾಟ:
ಬಂಧಿತ ಆರೋಪಿಗಳು ಉತ್ತರ ಪ್ರದೇಶದ ಶಾಮಲಿ, ಪಂಜಾಬ್‌ನ ಅಮೃತಸರ ಹಾಗೂ ಮಹಾರಾಷ್ಟ್ರದ ಶಿರಡಿಯಿಂದ ಅಕ್ರಮವಾಗಿ ಪಿಸ್ತೂಲ್‌ಗಳನ್ನು ತರಿಸಿಕೊಂಡು ನಗರದಲ್ಲಿ ಅಕ್ರಮ ಚಟುವಟಿಕೆಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರಿಗೆ ಮಾರಾಟ ಮಾಡುತ್ತಿದ್ದರು. ಅಯಾಜುಲ್ಲಾ ವಿವಿಧ ರಾಜ್ಯಗಳಿಂದ ಪಿಸ್ತೂಲ್‌ಗಳನ್ನು ತರಿಸಿಕೊಂಡು ಮಹಮದ್ ಅಲಿಗೆ ಮಾರಾಟ ಮಾಡುತ್ತಿದ್ದ. ಶಸ್ತ್ರಾಸ್ತ್ರ ಮಾರಾಟದ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಇನ್ಸ್‌ಪೆಕ್ಟರ್ ಹಜರೇಶ್ ಕಿಲ್ಲೇ ದಾರ್ ಮತ್ತವರ ಸಿಬ್ಬಂದಿ ಉತ್ತರ ಪ್ರದೇಶದ, ಶಾಮಲಿ, ಪಂಜಾಬ್‌ನ ಅಮೃತಸರ, ಮಹಾರಾಷ್ಟ್ರದ ಶಿರಡಿಗೆ ಸಮೇತ ಹೋಗಿ ಆರೋಪಿಗಳ ಪತ್ತೆ ಮಾಡಿ ಬಂಧಿಸಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಕೈಗೊಂಡಿದ್ದಾರೆ.

ಪಿಸ್ತೂಲ್ ಗಳ ವಶ:
ಆರೋಪಿ ಅಯಾಜ್ ವುಲ್ಲಾನನ್ನು ಬಂಧಿಸಿ ಎರಡು ಕಂಟ್ರಿಮೇಡ್ ಪಿಸ್ತೂಲ್ ಗಳನ್ನು ವಶಪಡಿಸಿಕೊಂಡು ತನಿಖೆಯನ್ನು ಮುಂದುವರೆಸಿ ಸೈಯದ್ ಸಿರಾಜ್ ಅಹ್ಮದ್, ಮೊಹಮದ್ ಅಲಿ ಹಾಗೂ ಅರುಣ್ ಕುಮಾರ್ ನನ್ನು ಬಂಧಿಸಲಾಗಿದೆ. ಆರೋಪಿ ಅಯಾಜ್ ವುಲ್ಲಾ ಇತರೆ ಆರೋಪಿಗಳ ಜೊತೆ ಸೇರಿ ಕಂಟ್ರಿಮೇಡ್ ಪಿಸ್ತೂಲ್, ಗನ್, ರೈಫ್‌ಗಳನ್ನು ಖರೀದಿಸಿ ನಗರದಲ್ಲಿ ರೌಡಿಗಳು ಹಾಗೂ ಆರೋಪಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು ಈತನ ವಿರುದ್ದ ಡಕಾಯಿತಿ ಯತ್ನ ಸೇರಿ ಎರಡು ಪ್ರಕರಣ ದಾಖಲಾಗಿದೆ ಈತನಿಂದ ಕಂಟ್ರಿಮೇಡ್ ಗನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಬೆದರಿಕೆಗೆ ಗನ್ ಖರೀದಿ:
ಆರೋಪಿ ಸೈಯದ್ ಸಿರಾಜ್ ಅಹ್ಮದ್ ಈತನ ವಿರುದ್ದ ಕೆ.ಜಿ ಹಳ್ಳಿ ಹಾಗೂ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದ್ದು ಆತ ತಲಾ ಒಂದು ಕಂಟ್ರಿಮೇಡ್ ಪಿಸ್ತೂಲ್ ರೈಫಲ್ ಅನ್ನು ಖರೀದಿಸಿ ಇಟ್ಟುಕೊಂಡಿದ್ದ. ಆರೋಪಿ ಮಹಮ್ಮದ್ ಅಲಿ ವಿರುದ್ಧ ಶಿವಾಜಿ ನಗರದಲ್ಲಿ ಹಲ್ಲೆ ಪ್ರಕರಣ ದಾಖಲಾಗಿದ್ದು ಆತ ತಲಾ ಒಂದು ಕಂಟ್ರಿಮೇಡ್ ಪಿಸ್ತೂಲ್ ಹಾಗೂ ರೈಫಲ್ ಅನ್ನು ಖರೀದಿಸಿ ತನ್ನ ಬಳಿ ಇಟ್ಟುಕೊಂಡಿದ್ದ. ಆರೋಪಿ ಲಾಂಗ್ ಅರುಣಾ ವಿರುದ್ಧ ಕೊರಟಗೆರೆ ಠಾಣೆಯಲ್ಲಿ ಡಕಾಯಿತಿ ಯತ್ನ, ಮಂಚೇನಹಳ್ಳಿ ಠಾಣೆಯಲ್ಲಿ ಕೊಲೆ ಯತ್ನ ಗೌರಿಬಿದನೂರಿನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಏರಿಯಾದಲ್ಲಿನ ಸಾರ್ವಜನಿಕರಿಗೆ ಹೆದರಿಸುವ ಸಲುವಾಗಿ ಒಂದು ಕಂಟ್ರಿಮೇಡ್ ಗನ್ ಅನ್ನು ಖರೀದಿಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com