ಕೋವಿಡ್ 3ನೇ ಅಲೆ: ಮನೆಮನೆಗೆ ವೈದ್ಯರ ಭೇಟಿ, ಸೋಂಕು ತಗ್ಗಿಸಲು ಬಿಬಿಎಂಪಿ ಕ್ರಮ

ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕಿನ ಪ್ರಮಾಣ ತಗ್ಗಿಸಲು ಸ್ವಾತಂತ್ರ್ಯೋತ್ಸವ ದಿನಾಚರಣೆ ನಂತರ ವೈದ್ಯರ ನಡೆ ಸೋಂಕಿತರ ಮನೆ ಕಡೆ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ಬಿಬಿಎಂಪಿ ಮುಂದಾಗಿದೆ.
ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಚಿವ ಆರ್.ಅಶೋಕ್
ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಚಿವ ಆರ್.ಅಶೋಕ್

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕಿನ ಪ್ರಮಾಣ ತಗ್ಗಿಸಲು ಸ್ವಾತಂತ್ರ್ಯೋತ್ಸವ ದಿನಾಚರಣೆ ನಂತರ ವೈದ್ಯರ ನಡೆ ಸೋಂಕಿತರ ಮನೆ ಕಡೆ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ಬಿಬಿಎಂಪಿ ಮುಂದಾಗಿದೆ. 

ನಗರದಲ್ಲಿ ಕೋವಿಡ್ ಸೋಂಕರನ್ನು ಪ್ರಾರಂಭಿಕ ಹಂತದಲ್ಲಿಯೇ ನಿಯಂತ್ರಿಸುವ ನಿಟ್ಟಿನಲ್ಲಿ ಆ.16ರಿಂದ ಪಾಲಿಕೆ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಮನೆಗೂ ವೈದ್ಯರ ತಂಡವನ್ನು ಕಳುಹಿಸಿ ಆರೋಗ್ಯ ತಪಾಸಣೆ ನಡೆಸುವ ವಿನೂತನ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಸಂಬಂಧ ಪ್ರಾಯೋಗಿಕವಾಗಿ 108 ತಂಡಗಳನ್ನು ರಚಿಸಲಿದ್ದು, ಈ ತಂಡಗಳನ್ನು ಮನೆ-ಮನೆಗೆ ಕಳುಹಿಸಿ ಮನೆಯ ಎಲ್ಲಾ ಸದಸ್ಯರ ಆರೋಗ್ಯ ತಪಾಸಣೆಗೆ ಒಳಪಡಿಸಲು ಯೋಜಿಸಲಾಗಿದೆ. 

ಸೋಮವಾರ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದ್ದಂತೆ ನಡೆದ ಸಭೆಯ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 

ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ, ಮಹದೇವಪುರ ಹಾಗೂ ಪೂರ್ವ ವಲಯ, ಯಲಹಂಕ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳಿವೆ. ಆದ್ದರಿಂದ ಪಾಲಿಕೆಯಿಂದ ಈಗಿನಿಂದಲೇ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪೈಕಿ ಪ್ರಾಯೋಗಿಕವಾಗಿ ಪ್ರತಿ ವಿಧಾನಸಭಾ ಕ್ಷೇತ್ರದ 2 ವಾರ್ಡ್ ಗಳಲ್ಲಿ ಮನೆ ಮನೆಗೆ ವೈದ್ಯರ ತಂಡವನ್ನು ಕಳುಹಿಸಿ ಆರೋಗ್ಯ ತಪಾಸಣೆ ನಡೆಸಲಾಗುವುದು. ಅದಕ್ಕಾಗಿ ಹೆಚ್ಚುವರಿಯಾಗಿ ವೈದ್ಯರನ್ನು ನಿಯೋಜನೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. 

ಮನೆ ಭೇಟಿ ನೀಡುವ ವೇಳೆ ಏನೇನು ಪ್ರಕರಣ ಕೇಳಬಹುದು ಎಂಬ ಪ್ರಶ್ನಾಪಟ್ಟಿ ಸಿದ್ದಪಡಿಸಿಕೊಂಡು ಎಲ್ಲಾ ಮನೆಯಲ್ಲಿ ಸಂಗ್ರಹಿಸುವ ಮಾಹಿತಿಯನ್ನು ಶಾಶ್ವತವಾಗಿಡುವ ನಿಟ್ಟಿನಲ್ಲಿ ತಂತ್ರಾಂಶ ರೂಪಿಸಲು ಸಿದ್ಧತೆ ನಡೆಸಿದ್ದೇವೆ. ಜೊತೆಗೆ ನಾಗರೀಕರಲ್ಲಿ ಅರಿವು ಮೂಡಿಸುವ ಕರಪತ್ರ ನೀಡಲಾಗುವುದು. ಮನೆಗೆ ಭೇಟಿ ನೀಡುವ ವೇಲೆ ಲಸಿಕೆ ಪಡೆದಿರುವ ಬಗ್ಗೆ ಖಾತರಿ ಮತ್ತು ಸೋಂಕು ಲಕ್ಷಣಗಳಿದ್ದರೆ ಪರೀಕ್ಷೆ ನಡೆಸಿರುವ ಕುರಿತು ಮತ್ತು ಯಾವುದಾದರೂ ಕಾಯಿಲೆಗಳು ಇವೆಯೇ ಎಂಬುದು ಸೇರಿದಂತೆ ಇನ್ನಿತರೆ ಮಾಹಿತಿ ಇರಲಿದೆ. ರೋಗಿಗಳ ರಕ್ಷಣೆ, ರೋಗ ಬಾರದಂತೆ ತಡೆಗಟ್ಟಲು, ಜನರಲ್ಲಿ ಆತ್ಮಸ್ತೈರ್ಯ ತುಂಬಲು ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಅದಕ್ಕಾಗಿ ವಾಹನ ಹಾಗೂ ಇನ್ನಿತರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com