ಕೋವಿಡ್ 3ನೇ ಅಲೆ ಆತಂಕ: ಶಾಲೆಗಳಲ್ಲೇ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ; ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ಕೊರೋನಾ 3ನೇ ಅಲೆ ಎದುರಿಸಲು ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಶಾಲಾ ಹಂತದಲ್ಲಿಯೇ ರಾಜ್ಯಾದ್ಯಂತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಮೈಸೂರು: ಕೊರೋನಾ 3ನೇ ಅಲೆ ಎದುರಿಸಲು ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಶಾಲಾ ಹಂತದಲ್ಲಿಯೇ ರಾಜ್ಯಾದ್ಯಂತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸೋಮವಾರ ಮೈಸೂರಿಗೆ ಆಗಮಿಸಿದ ಅವರು ಚಾಮುಂಡೇಶ್ವರಿ, ಸುತ್ತೂರು ಮಠಕ್ಕೆ ಭೇಟಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ 3ನೇ ಅಲೆಯ ಸ್ಥಿತಿಗತಿ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. 

ಮಕ್ಕಳ ಸಮಗ್ರ ಆರೋಗ್ಯ ರಕ್ಷಣೆ ನಮ್ಮ ಆದ್ಯತೆಯಾಗಿದೆ. ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈಗಾಗಲೇ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ತಜ್ಞರು ಕೂಡ ಮಕ್ಕಳ ಆರೋಗ್ಯದತ್ತ ಗಮನ ಹರಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಶಾಲೆಯಲ್ಲಿ ಈ ಶಿಬಿರ ಆಯೋಜಿಸಲಾಗುತ್ತಿದೆ. 6-14 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು. 

ಕೊರೋನಾ 3ನೇ ಅಲೆ ಹಿನ್ನೆಲೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರ ಕೋವಿಡ್ ಸೋಂಕು ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಗಡಿ ಭಾಗದಲ್ಲಿ ಬಿಸಿ ತಪಾಸಣೆ ಆರಂಭಿಸಲಾಗಿದೆ. 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಗಡಿ ಪ್ರವೇಶಿಸುವವರಿಗೆ ಆರ್'ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಗಡಿ ಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ 2 ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು. 

ಗಡಿ ಭಾಗದ ಹಳ್ಳಿ ಅಥವಾ ಹಾಡಿಯ ಜನರಿಗೆ ಮೊದಲ ಪ್ರಾಶಸ್ತ್ಯದ ಲಸಿಕೆ ನೀಡಬೇಕು. ಡಿಸಿ, ಎಸ್ಪಿ, ಡಿವೈಎಸ್ಪಿ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದರು. 

ಜಿಲ್ಲೆಗೆ 14 ಆಕ್ಸಿಜನ್ ಜನರೇಟರ್ ಮಂಜೂರಾಗಿದೆ. ಈಗಾಗಲೇ 3 ಸ್ಥಾಪನೆಯಾಗಿದ್ದು, ಒಂದು ವಾರದೊಳಗೆ 6 ಆರಂಬವಾಗಲಿದೆ. ಉಳಿದ 5 ಆರಂಭವಾಗಬೇಕಿದೆ. ಅವುಗಳನ್ನು ಶೀಘ್ರದಲ್ಲೇ ಒದಗಿಸುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದ್ದೇನೆ. ಐಸಿಯು ಟ್ಯಾಂಕರ್ ಸ್ಟೋರೇಜ್ ಇರಬೇಕು. ಪೈಪಿಂಗ್ ಸರಿಪಡಿಸಬೇಕು. ಮಕ್ಕಳಿಗೆ 20 ವೆಂಟಿಲೇಟರ್ ಕೇಳಿದ್ದಾರೆಂದು ವಿವರಿಸಿದರು. 

ಹೆಚ್ಚಿನ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಪ್ರತೀನಿತ್ಯ 5 ಲಕ್ಷ ಜನರಂತೆ ತಿಂಗಳಿಗೆ 1.5 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ ಅಂತರ್ ರಾಜ್ಯ ಗಡಿಯ 10 ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲ ಜನರಿಗೆ ಲಸಿಕೆ ಹಾಕಲು ಮತ್ತು ಈ ಪ್ರದೇಶಗಳಲ್ಲಿ ಪರೀಕ್ಷೆಯನ್ನು ಹೆಚ್ಚಿಸಲು ಎಂಟು ಗಡಿ ಜಿಲ್ಲಾ ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com