ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶ್ರುತಿ: ಬಾಲ ಕಾರ್ಮಿಕತೆ ವಿರುದ್ಧ ರೈಲ್ವೆ ಇಲಾಖೆಗೆ ಮಕ್ಕಳ ಹಕ್ಕು ಆಯೋಗ ನೋಟಿಸ್
ರೈಲ್ವೆ ಕೆಲಸಗಳಿಗೆ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗ (ಎನ್ ಸಿಪಿಸಿಆರ್), ಒಂದು ವಾರದೊಳಗೆ ವಿಸ್ತ್ರೃತ ವರದಿಯನ್ನು ಸಲ್ಲಿಸುವಂತೆ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಆದೇಶ ನೀಡಿದೆ.
Published: 10th August 2021 07:53 AM | Last Updated: 10th August 2021 01:01 PM | A+A A-

ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿ
ಬೆಂಗಳೂರು: ರೈಲ್ವೆ ಕೆಲಸಗಳಿಗೆ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗ (ಎನ್ ಸಿಪಿಸಿಆರ್), ಒಂದು ವಾರದೊಳಗೆ ವಿಸ್ತ್ರೃತ ವರದಿಯನ್ನು ಸಲ್ಲಿಸುವಂತೆ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಆದೇಶ ನೀಡಿದೆ.
ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ತನಿಖಾ ವರದಿಯನ್ನು ಸಲ್ಲಿಸುವಂತೆ ಕೂಡ ರಾಮನಗರ ಜಿಲ್ಲಾಧಿಕಾರಿಗೆ ಸಹ ಆದೇಶ ಹೊರಡಿಸಿದೆ.
ಕಳೆದ ಆಗಸ್ಟ್ 2ರಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಮಕ್ಕಳನ್ನು ಕಠಿಣ ಕೆಲಸಕ್ಕೆ ಬಳಸಿಕೊಂಡ ಬಗ್ಗೆ ವರದಿಯೊಂದು ಪ್ರಕಟವಾಗಿತ್ತು. ರೈಲ್ವೆ ಕಾಂಟ್ರಾಕ್ರ್ ಒಬ್ಬರು ಕಲ್ಲು ಹೊರುವಂತಹ ಕಠಿಣ ಕೆಲಸಗಳನ್ನು ಬೆಂಗಳೂರು ರೈಲ್ವೆ ವಿಭಾಗದ ಶೆಟ್ಟಿಹಳ್ಳಿ ರೈಲ್ವೆ ನಿಲ್ದಾಣದ ರೈಲ್ವೆ ಹಳಿ ಬಳಿ ಮಕ್ಕಳಿಂದ ಮಾಡಿಸುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿತ್ತು. ಪತ್ರಿಕೆಯಲ್ಲಿ ವರದಿ ಬಂದ ತಕ್ಷಣ ಅದನ್ನು ಗಂಭೀರವಾಗಿ ಪರಿಗಣಿಸಿರುವ ಮಕ್ಕಳ ಹಕ್ಕು ಆಯೋಗ ಆಗಸ್ಟ್ 3ರಂದೇ ಇಲಾಖೆಯ ಪ್ರಧಾನ ವ್ಯವಸ್ಥಾಪಕರಿಗೆ ನೊಟೀಸ್ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸ್ಥಳದಲ್ಲಿ ಮೂವರು ಬಾಲಕಿಯರು ಮತ್ತು ನಾಲ್ವರು ಬಾಲಕರು ಸೇರಿದಂತೆ 7 ಮಂದಿ ಕೆಲಸ ಮಾಡುತ್ತಿರುವ ಬಗ್ಗೆ ಮಕ್ಕಳ ಹಕ್ಕು ಆಯೋಗ ಸ್ವಯಂ ಪ್ರೇರಿತ ಕೇಸನ್ನು ದಾಖಲಿಸಿಕೊಂಡು ನೊಟೀಸ್ ಜಾರಿ ಮಾಡಿದೆ.
ಇದಕ್ಕೆ ಮಕ್ಕಳ ಹಕ್ಕು ಆಯೋಗದ ರಿಜಿಸ್ಟ್ರಾರ್ ಅನು ಚೌಧರಿ ಸಹಿ ಮಾಡಿದ್ದಾರೆ. ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರಿಗೆ ಕಳುಹಿಸಿರುವ ಆದೇಶದಲ್ಲಿ ಬಾಲ ಕಾರ್ಮಿಕತೆಯನ್ನು ತಡೆಯಲು ರೈಲ್ವೆ ಅಧಿಕಾರಿಗಳು ಹಾಕಿಕೊಂಡಿರುವ ನೀತಿ-ನಿಯಮಗಳು, ಮಾರ್ಗಸೂಚಿಗಳ ಕುರಿತು ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಆಯೋಗ ಕೇಳಿದೆ.
ಮತ್ತೊಂದು ನೊಟೀಸ್ ನ್ನು ರಾಮನಗರ ಜಿಲ್ಲಾಧಿಕಾರಿಗೆ ಕಳುಹಿಸಿದ್ದು, ಅದರಲ್ಲಿ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಕೈಗೊಂಡಿರುವ ಕ್ರಮಗಳ ಕುರಿತು ಮೂರು ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಇತರ ಅಂಶಗಳ ಜೊತೆಗೆ, ಬಾಲ ನ್ಯಾಯ ಮತ್ತು ಬಾಲಾಪರಾಧಿ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986, ಮತ್ತು ಬಂಧಿತ ಕಾರ್ಮಿಕ ನಿರ್ಮೂಲನೆ ಕಾಯಿದೆ, 1976 ರ ಪ್ರಕಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.